LATEST NEWS
ಗುರುಪುರ ಮನೆಗಳ ಮೇಲೆ ಗುಡ್ಡ ಕುಸಿತ – ಮಕ್ಕಳು ಮಣ್ಣಿನಡಿ ಸಿಲುಕಿರುವ ಶಂಕೆ

ಮಂಗಳೂರು ಜುಲೈ 5: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದಲ್ಲಿ ನಡೆದಿದೆ.
ಮಂಗಳೂರಿನ ಕೈಕಂಬ ಬಾಂಗ್ಲಗುಡ್ಡೆಯಲ್ಲಿ ಗುಡ್ಡ ಕುಸಿದಿದ್ದು ಹಲವು ಮನೆಗಳ ಮೇಲೆ ಬೀಳುತ್ತಿದೆ. ಹಲವು ಮನೆ,ಕುಟುಂಬ ಅಪಾಯದಲ್ಲಿದೆ ಎಂದು ಹೇಳಲಾಗಿದ. ಈಗಾಗಲೇ ನಾಲ್ಕು ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದ್ದು, ಇನ್ನೂ ಎಂಟು ಮನೆಗಳು ಅಪಾಯದಲ್ಲಿದೆ ಎಂದು ಹೇಳಲಾಗಿದೆ. ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು ಸ್ಥಳೀಯರು ಮಣ್ಣು ತೆರವು ಗೊಳಿಸುತ್ತಿದ್ದಾರೆ. ಮಣ್ಣಿನ ಸಿಲುಕಿರುವವರ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ.

ಸ್ಥಳಕ್ಕೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ. ಕಾರ್ಯಾಚರಣೆ ಮುಂದುವರೆದಿದ್ದು ಇನ್ನೂ ಎಂಟು ಮನೆಗಳು ಕುಸಿಯುವ ಅಪಾಯದಲ್ಲಿವೆ ಎನ್ನಲಾಗಿದೆ. ಗುಡ್ಡ ಕುಸಿದಿರುವ ಜಾಗ ಸರ್ಕಾರಿ ಜಮೀನಾಗಿದ್ದು ಇಲ್ಲಿ ಬಡವರಿಗೆ ಸೈಟ್ಗಳನ್ನು ನೀಡಲಾಗಿತ್ತು, 30 ಮನೆಗಳನ್ನು ಬಡವರು ನಿರ್ಮಿಸಿಕೊಂಡಿದ್ದರು, ಸುಮಾರು ಹತ್ತು ವರ್ಷಗಳಿಂದಲೂ ಇಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ. 15 ಮನೆಯ ಜನರನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದ್ದು ದುರ್ಘಟನೆ ನಡೆದ ಸ್ಥಳದಿಂದ ಪೊಲೀಸರು ಜನರನ್ನ ದೂರ ಕಳುಹಿಸುವ ಮೂಲಕ ಹೆಚ್ಚಿನ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಕ್ಕೆ 3 ಜೆಸಿಬಿಗಳನ್ನು ಬಳಸಿಕೊಳ್ಳಲಾಗಿದೆ.