Connect with us

LATEST NEWS

ಸಂಡೇ ಕರ್ಫ್ಯೂ ಜಾರಿ ; ಮಂಗಳೂರು ಬಣ ಬಣ !

ಮಂಗಳೂರು, ಜುಲೈ 5 : ಸಂಡೇ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಮಂಗಳೂರು ಸಂಪೂರ್ಣ ಸ್ತಬ್ಧ ಆಗಿದೆ. ಯಾವುದೇ ವಾಹನಗಳು ರಸ್ತೆಗಿಳಿದಿಲ್ಲ. ಮಂಗಳೂರಿನ ರಸ್ತೆಗಳು ವಾಹನ, ಜನರಿಲ್ಲದೆ ಬಿಕೋ ಎನ್ನುತ್ತಿವೆ. ಅನ್ ಲಾಕ್ 2.0 ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ ಸಂಡೇ ಕರ್ಫ್ಯೂ ಜಾರಿಯಾಗಿದೆ.

ರಾಜಧಾನಿ ಬೆಂಗಳೂರು, ಬಳ್ಳಾರಿ ಮತ್ತು ಮಂಗಳೂರಿನಲ್ಲಿ ಸದ್ಯಕ್ಕೆ ಸೋಂಕು ತೀವ್ರವಾಗಿ ಹರಡುತ್ತಿರುವ ಕಾರಣ ಮತ್ತೆ ಲಾಕ್ ಡೌನ್ ಮಾಡಬೇಕೆಂಬ ಆಗ್ರಹ ಕೇಳಿಬಂದಿತ್ತು. ಸೋಂಕು ಪೀಡಿತ ಪ್ರದೇಶದಲ್ಲಿ ಸೀಲ್ ಡೌನ್ ಆಗಿದ್ದರೂ, ಅದರ ವ್ಯಾಪ್ತಿ 100 ಮೀಟರ್ ಸೀಮಿತ ಆಗಿರುವುದರಿಂದ ಟೋಟಲ್ ಲಾಕ್ ಡೌನ್ ಮಾಡಬೇಕೆಂದು ಜ‌ನ ಒತ್ತಾಯಿಸಿದ್ದರು. ಆದರೆ, ರಾಜ್ಯ ಸರಕಾರ ಪೂರ್ತಿಯಾಗಿ ಲಾಕ್ ಡೌನ್ ಜಾರಿಗೆ ತರಲು ಮುಂದಾಗಿಲ್ಲ. ಬದಲಿಗೆ, ಜುಲೈ ತಿಂಗಳಲ್ಲಿ ಪ್ರತಿ ಭಾನುವಾರ ಇಡೀ ರಾಜ್ಯವನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದೆ. ಅದರಂತೆ, ಮೊದಲ ಕರ್ಫ್ಯೂ ಜಾರಿಗೆ ಬಂದಿದ್ದು ಜನರು ಸ್ವಯಂಪ್ರೇರಿತವಾಗಿ ಬಂದ್ ಬೆಂಬಲಿಸಿದ್ದಾರೆ.

ಸೋಂಕಿನ ಭಯದಲ್ಲಿ ಜನರು ಹೊರಗೆ ಇಳಿಯುವುದನ್ನೇ ಬಿಟ್ಟಿದ್ದಾರೆ. ಇಂದು ಮಾರುಕಟ್ಟೆ ಸೇರಿದಂತೆ ಎಲ್ಲವೂ ಬಂದ್ ಆಗಿದ್ದು ಹಾಲು, ಪತ್ರಿಕೆ ಮತ್ತು ಆಸ್ಪತ್ರೆಗೆ ಮಾತ್ರ ಅವಕಾಶ ನೀಡಲಾಗಿದೆ. ಜನರು ತುರ್ತು ಅಗತ್ಯಕ್ಕಾಗಿ ಹೊರಬಂದರೂ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಜನರ ಓಡಾಟದ ಮೇಲೆ ನಿಗಾ ಇರಿಸಿದ್ದಾರೆ. ನಾಳೆ ಬೆಳಗ್ಗೆ (ಸೋಮವಾರ) 5 ಗಂಟೆ ವರೆಗೆ ಈ ಕರ್ಫ್ಯೂ ಜಾರಿ ಇರಲಿದೆ.

 

Facebook Comments

comments