KARNATAKA
ಬ್ಯಾಂಕ್ ಲಾಕರಲ್ಲಿಟ್ಟ 1.75 ಕೇಜಿ ಚಿನ್ನ ಮಾಯ !!
ಬೆಂಗಳೂರು, ಆಗಸ್ಟ್ 3 : ಮನೆಯಲ್ಲಿ ಹೆಚ್ಚು ಬಂಗಾರ ಇಟ್ಟರೆ ಕಳ್ಳರ ಭಯ. ಹಾಗೆಂದೇ ಬ್ಯಾಂಕ್ ಲಾಕರ್ ಗಳಲ್ಲಿ ಚಿನ್ನ ಇಡಲು ಶುರು ಮಾಡಿದ್ದರು ಜನ.. ಆದರೆ, ಬ್ಯಾಂಕ್ ಲಾಕರಲ್ಲಿಟ್ಟ ಚಿನ್ನವನ್ನೂ ಎಗರಿಸಿ ಬಿಟ್ಟರೆ ಹೇಗೆ? ಹೌದು.. ಬೆಂಗಳೂರಿನಲ್ಲಿ ಬ್ಯಾಂಕ್ ಲಾಕರಲ್ಲಿಟ್ಟ ಚಿನ್ನವೂ ಮಾಯವಾಗಿದ್ದು ಚಿನ್ನ ಕಳಕೊಂಡ ಉದ್ಯಮಿಯೊಬ್ಬರು ಪೊಲೀಸ್ ಕೇಸು ದಾಖಲಿಸಿದ್ದಾರೆ.
ಜೆಪಿ ನಗರದ ನಿವಾಸಿ ಶಿವಪ್ರಸಾದ್ ಎನ್ನುವ ವ್ಯಕ್ತಿ ಜಯನಗರದ ಖಾಸಗಿ ಬ್ಯಾಂಕಿನಲ್ಲಿ ಕಳೆದ ಫೆಬ್ರವರಿಯಲ್ಲಿ 1.75 ಕೇಜಿ ಬಂಗಾರ ಇಟ್ಟಿದ್ದರು. ಜುಲೈ 22ರಂದು ಬ್ಯಾಂಕಿಗೆ ತೆರಳಿದ್ದ ಶಿವಪ್ರಸಾದ್ ಲಾಕರ್ ತಪಾಸಣೆ ಮಾಡಿದಾಗ, ಬ್ಯಾಂಕ್ ಲಾಕರಲ್ಲಿ ಚಿನ್ನ ಇರಲಿಲ್ಲ. ಫೆಬ್ರವರಿ ತಿಂಗಳ 27 ರಂದು ಮದುವೆ ಇದ್ದುದರಿಂದ ಒಂದಷ್ಟು ಜುವೆಲ್ಲರಿಯನ್ನು ಬ್ಯಾಂಕಿನಿಂದ ತೆಗೆದಿದ್ದೆ. ಆ ಬಳಿಕ ಲಾಕ್ ಡೌನ್ ಆಗಿದ್ದರಿಂದ ಬ್ಯಾಂಕಿಗೆ ತೆರಳಲು ಸಾಧ್ಯವಾಗಿಲ್ಲ.
ಮೊನ್ನೆ ಜುಲೈ 22ರಂದು ಬ್ಯಾಂಕಿಗೆ ತೆರಳಿದ್ದು ಲಾಕರ್ ಓಪನ್ ಮಾಡಿದಾಗ ಶಾಕ್ ಆಯ್ತು. ಸುಮಾರು 85 ಲಕ್ಷ ಮೌಲ್ಯದ 1.75 ಕೇಜಿ ಚಿನ್ನಾಭರಣ ಕಾಣೆಯಾಗಿತ್ತು ಎಂದು ಶಿವಪ್ರಸಾದ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು ಒಬ್ಬ ಬ್ಯಾಂಕ್ ನೌಕರ ಚಿನ್ನ ಕದ್ದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಒಬ್ಬ ನೌಕರನ ವಿರುದ್ಧ ದೂರು ದಾಖಲಿಸಿದ್ದು ಎಫ್ಐಆರ್ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.