LATEST NEWS
ಬಿಜೆಪಿಗೆ ತಾಕತ್ತಿದ್ದರೆ ನಮ್ಮ ಮೇಲೆ ಡಿಫಮೇಶನ್ ಕೇಸ್ ಹಾಕಲಿ – ದಿನೇಶ್ ಗುಂಡೂರಾವ್
ಉಡುಪಿ ಅಗಸ್ಟ್ 3 : ರಾಜ್ಯದಲ್ಲಿ ಕೊರೊನಾ ಸಂದರ್ಭ ವೈದ್ಯಕೀಯ ಸಲಕರಣೆಗಳ ಖರೀದಿ ವಿಚಾರದಲ್ಲಿ ವ್ಯಾಪಕ ಲೂಟಿಯಾಗಿದ್ದು, ಕಾಂಗ್ರೆಸ್ ಪಕ್ಷ ಆರೋಪ ಮಾಡಿ 25 ದಿನವಾದರೂ ಸರಕಾರ ಯಾವುದೇ ಉತ್ತರ ನೀಡದೇ ಲೀಗಲ್ ನೋಟೀಸ್ ಕಳುಹಿಸುತ್ತಿದ್ದು, ಧೈರ್ಯ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕಿ ಎಂದು ಗುಂಡೂರಾವ್ ಸವಾಲೆಸೆದಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರ ಕರ್ನಾಟಕವನ್ನು ಕೈಬಿಟ್ಟಿದೆ. ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಅನುದಾನ ಬರುತ್ತಿಲ್ಲ ಎಂದ ಅವರು ವೆಂಟಿಲೇಟರ್, ಪಿಪಿಇ, ಸ್ಯಾನಿಟೈಸರ್ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ, ಪ್ರತಿಯೊಂದು ವಸ್ತುಗಳನ್ನು ರಾಜ್ಯಸರಕಾರ ಮೂರರಿಂದ ನಾಲ್ಕು ಪಟ್ಟು ಹಣ ಕೊಟ್ಟು ಖರೀದಿ ಮಾಡುತ್ತಿದ್ದು, ಕೊರೊನಾ ಸಲಕರಣೆ ಖರೀದಿಯಲ್ಲು ಶೇಕಡಾ 50 ಲೂಟಿಯಾಗಿದೆ ಎಂದು ಗುಂಡೂರಾವ್ ಆರೋಪಿಸಿದರು.
ಕೊರೊನಾ ಸಂದರ್ಭ ಸಲಕರಣೆಗಳ ಖರೀದಿಯಲ್ಲಿ ಬಿಜೆಪಿ ಸರಕಾರ ಎರಡು ಸಾವಿರ ಕೋಟಿ ಹಣವನ್ನು ಲೂಟಿ ಮಾಡಿದೆ. ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದ್ರೆ ಲೀಗಲ್ ನೋಟೀಸ್ ಕೊಡುತ್ತಾರೆ, ಧೈರ್ಯ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕಿ, ಕಾಂಗ್ರೆಸ್ ಕೋರ್ಟ್ ಮೂಲಕ ಹೋರಾಟ ಮಾಡುತ್ತದೆ ಎಂದರು.
ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಕಾಂಗ್ರೆಸ್ ಬಯಲಿಗೆಳೆಯದೆ ಬಿಡುವುದಿಲ್ಲ. ಬಿಜೆಪಿಯ ದುರಾಡಳಿತದ ವಿರುದ್ಧ ಕಾಂಗ್ರೆಸ್ ನ ಹೋರಾಟ ಇಲ್ಲಿಗೆ ಮುಗಿದಿಲ್ಲ. ಬಿಜೆಪಿಗೆ ತಾಕತ್ತಿದ್ದರೆ ನಮ್ಮ ಮೇಲೆ ಡಿಫಮೇಶನ್ ಪ್ರಕರಣ ದಾಖಲಿಸಬಹುದಿತ್ತು. ಅದನ್ನು ಬಿಟ್ಟು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಸರಕಾರದ ಖರೀದಿಯಲ್ಲಿ ಪಾರದರ್ಶಕವಿದ್ದರೆ, ಇದರ ಬಗ್ಗೆ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಸವಾಲು ಹಾಕಿದರು.