LATEST NEWS
ಮರಳು ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ- ದಿನಕರ ಬಾಬು
ಮರಳು ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ- ದಿನಕರ ಬಾಬು
ಉಡುಪಿ, ಜನವರಿ 16: ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ಮರಳು ದೊರೆಯುವ ಕುರಿತಂತೆ ಸ್ಪಷ್ಟವಾದ ಮಾಹಿತಿ ನೀಡಿ, ಪತ್ರಿಕಾ ಪ್ರಕಟಣೆಯಲ್ಲಿ ನಿರ್ಮಿತಿ ಕೇಂದ್ರದ ಆವರಣದಲ್ಲಿ ಮರಳು ಲಭ್ಯವಿದೆ ಎಂದು ಪ್ರಕಟಣೆ ನೀಡುತ್ತೀರಿ, ಆದರೆ ಅಲ್ಲಿ ವಿಚಾರಿಸಿದಾಗ ಮರಳು ಲಭ್ಯವಿಲ್ಲ ಎಂಬ ಮಾಹಿತಿ ಸಿಗುತ್ತಿದೆ, ಆದ್ದರಿಂದ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.
ಅವರು ಬುಧವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಸಾರ್ವಜನಿಕರು ಜನ ಪ್ರತಿನಿಧಿಗಳಾದ ನಮಗೆ ಮರಳು ಅಲಭ್ಯತೆ ಕುರಿತು ದೂರುತ್ತಿದ್ದು, ಈ ಕುರಿತು ವಿಚಾರಿಸಿಲು ನಾನೇ ಖುದ್ದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಪರ್ಕಿಸಿದಾಗ ಟ್ರಿಪ್ ಶೀಟ್ ಇಲ್ಲ, ಸ್ಟಾಕ್ ಇಲ್ಲ ಎಂಬ ಉತ್ತರ ನೀಡುತ್ತೀರಿ, ಜನರಿಗೆ ವಿತರಿಸಲು ಲಭ್ಯವಿಲ್ಲವಾದಲ್ಲಿ, ಮರಳು ಲಭ್ಯವಿದೆ ಪಡೆಯಿರಿ ಎಂದು ಪತ್ರಿಕಾ ಪ್ರಕಟಣೆ ನೀಡುವ ಉದ್ದೇಶವಾದರೂ ಏನು, ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗೆ ದಿನಕರ ಬಾಬು ಪ್ರಶ್ನಿಸಿದರು.
ಈ ಬಗ್ಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ, ಜಿಲ್ಲೆಯ ನಾನ್ ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 5 ಬ್ಲಾಕ್ ಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದ್ದು, ಇದರಲ್ಲಿ 16000 ಮೆ.ಟನ್ ಮಾತ್ರ ಮರಳು ದೊರೆತಿದ್ದು, 2 ನೇ ಹಂತದಲ್ಲಿ 11 ಬ್ಲಾಕ್ ಗಳನ್ನು ಗುರುತಿಸಿ, ಮರಳು ತೆಗೆಯುವ ಕುರಿತಂತೆ ಕೆ.ಸಿ.ಝಡ್.ಎಂ.ಎ (ಕರ್ನಾಟಕ ಕೋಸ್ಟಲ್ ಝೋನ್ ಮ್ಯಾನೇಜ್ ಮೆಂಟ್ ಅಥಾರಿಟಿ)ಗೆ ಅನುಮತಿ ಕೋರಿದ್ದು, ಶೀಘ್ರದಲ್ಲಿ ಅನುಮತಿ ದೊರೆಯುವ ನೀರೀಕ್ಷೆಯಿದೆ, ಈ 11 ಬ್ಲಾಕ್ ಗಳಲ್ಲಿ 16 ಲಕ್ಷ ಮೆ.ಟನ್ ಮರಳು ದೊರೆಯಲಿದ್ದು, ಜಿಲ್ಲೆಯ ಒಟ್ಟು ಮರಳಿನ ಬೇಡಿಕೆ 13 ಲಕ್ಷ ಮೆ.ಟನ್ ಇದ್ದು, ಜಿಲ್ಲೆಯ ಅಗತ್ಯಕ್ಕೆ ಸಾಕಷ್ಟು ಮರಳು ದೊರೆಯಲಿದ್ದು, ಮರಳಿನ ದರ ಸಹ ಕಡಿಮೆಯಾಗಲಿದೆ ಎಂದು ಹೇಳಿದರು.