ಲೋಕಸಭಾ ಚುನಾವಣೆಗೆ ಸಿದ್ದತೆ ಜಿಲ್ಲೆಯ ಅರ್ಹ ಮತದಾರರ ಅಂತಿಮ ಪಟ್ಟಿ ಪ್ರಕಟ

ಮಂಗಳೂರು ಜನವರಿ 16 : ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಚುನಾವಣಾ ಕಾರ್ಯಗಳು ಗರಿಗೆದರಿವೆ. ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಇಂದು ಜಿಲ್ಲೆಯ ಅರ್ಹ ಮತದಾರರ ಪಟ್ಟಿಯ ಅಂತಿಮ ಯಾದಿಯನ್ನು ಇಂದು ಪ್ರಕಟಿಸಿದರು. ಅದರಂತೆ ಜಿಲ್ಲೆಯಲ್ಲಿ ಒಟ್ಟು 16,98,868 ಮತದಾರರಿದ್ದಾರೆ. ಅದರಲ್ಲಿ 8,64,045 ಮಹಿಳೆಯರಿದ್ದು ಲಿಂಗಾನುಪಾತ 1,035 ಆಗಿದೆ ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್ ತಿಳಿಸಿದ್ದಾರೆ.

ಅವರು ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅಂತಿಮ ಮತದಾರ ಪಟ್ಟಿಯ ಮಾಹಿತಿಗಳನ್ನು ಬಹಿರಂಗಪಡಿಸಿದ ಅವರು ಒಟ್ಟು ಮತದಾರರಲ್ಲಿ 8,34,725 ಪುರುಷ ಮತದಾರರು ಇದ್ದು 8,64,045 ಮಹಿಳಾ ಮತದಾರರಿದ್ದಾರೆ ಎಂದು ತಿಳಿಸಿದರು, ಮತ್ತು 98 ಇತರ ಮತದಾರರಿದ್ದಾರೆ. ಮತದಾರ ಮತ್ತು ಜನಸಂಖ್ಯಾ ದರ ಪ್ರತಿಶತ 75.06 ಆಗಿದ್ದು, ರಾಜ್ಯದ ದರದಷ್ಟೇ ಇರುತ್ತದೆ ಎಂದು ಹೇಳಿದ ಜಿಲ್ಲಾಧಿಕಾರಿಯವರು, ಅಂತಿಮ ಯಾದಿಯನ್ನು 2018ರ ಅ.10ರಂದು ಎಲ್ಲಾ ಮತಗಟ್ಟೆಗಳಲ್ಲಿ ಪ್ರಚುರ ಪಡಿಸಲಾಗಿದೆ. 20.10.18ರಂದು ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆದು ಮತದಾರರ ಪಟ್ಟಿಯನ್ನು ವಿತರಿಸಲಾಗಿದೆ ಎಂದರು.

ಅರ್ಹ ಮತದಾರರ ನೋಂದಣಿಗಾಗಿ 2018ರ ನ.17 ಮತ್ತು 18ರಂದು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಕಾಲೇಜುಗಳಲ್ಲಿ ಮಿಂಚಿನ ನೋಂದಣಿ ಹಮ್ಮಿಕೊಳ್ಳಲಾಗಿತ್ತು. 2018 ನ.23ರಿಂದ 25ರ ತನಕ ಚುನಾವಣಾ ಆಯೋಗದ ಸೂಚನೆಯಂತೆ ಎಲ್ಲಾ ಮತಗಟ್ಟೆಗಳು ಮತ್ತು ಕಾಲೇಜುಗಳಲ್ಲಿ ವಿಶೇಷ ನೋಂದಣಿ ಅಭಿಯಾನ ನಡೆಸಲಾಗಿತ್ತು ಎಂದು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ವಿವರಿಸಿದರು.

ಮತದಾರರ ಪಟ್ಟಿ ಅಂತಿಮಗೊಂಡಿದ್ದರೂ ಮತದಾರರ ಪಟ್ಟಿ ಸೇರ್ಪಡೆ ಮತ್ತು ಮತದಾರರ ಪಟ್ಟಿಯಿಂದ ತೆಗೆಯಲು, ತಿದ್ದುಪಡಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ನುಡಿದ ಜಿಲ್ಲಾಧಿಕಾರಿ, ಜ.25ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಎಲ್ಲಾ ಯುವ ಮತದಾರರಿಗೆ (18-19ರ ವಯೋಮಿತಿ) ಮತದಾರ ಚೀಟಿಯನ್ನು ವಿತರಿಸಲಾಗುವುದು.

ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಪುರಭವನದಲ್ಲಿ ಆಚರಿಸಲಾಗುವುದು ಎಂದರು. ಜಿಲ್ಲೆಯಲ್ಲಿ 71 ನೂತನ ಮತಗಟ್ಟೆಗಳನ್ನು ರಚಿಸಲಾಗಿದೆ. ಹಿಂದೆ 1,790 ಮತಗಟ್ಟೆಗಳಿದ್ದು, ಈಗಿರುವ ಮತಗಟ್ಟೆಗಳ ಸಂಖ್ಯೆ 1,861ಕ್ಕೆ ಹೆಚ್ಚಳವಾಗಿದೆ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 241, ಮೂಡಬಿದರೆಯಲ್ಲಿ 221, ಮಂಗಳೂರು ನಗರ ಉತ್ತರದಲ್ಲಿ 245, ಮಂಗಳೂರು ನಗರ ದಕ್ಷಿಣದಲ್ಲಿ 244, ಮಂಗಳೂರು ಕ್ಷೇತ್ರದಲ್ಲಿ 210, ಬಂಟ್ವಾಳದಲ್ಲಿ 249, ಪುತ್ತೂರಿನಲ್ಲಿ 220 ಮತ್ತು ಸುಳ್ಯದಲ್ಲಿ 231 ಮತಗಟ್ಟೆಗಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Facebook Comments

comments