LATEST NEWS
ಒಂದು ವಾರದೊಳಗೆ ಶಿರಾಡಿ ಘಾಟ್ ರಸ್ತೆ ದುರಸ್ತಿಗೆ ಕೇಂದ್ರ ಹೆದ್ದಾರಿ ಸಚಿವರ ಸೂಚನೆ
ಒಂದು ವಾರದೊಳಗೆ ಶಿರಾಡಿ ಘಾಟ್ ರಸ್ತೆ ದುರಸ್ತಿಗೆ ಕೇಂದ್ರ ಹೆದ್ದಾರಿ ಸಚಿವರ ಸೂಚನೆ
ಮಂಗಳೂರು ಅಗಸ್ಟ್ 28: ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನನ್ನು ಒಂದು ವಾರದೊಳಗೆ ಸಂಚಾರಕ್ಕೆ ಮಕ್ತಗೊಳಿಸಬೇಕೆಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೇತ್ರತ್ವದ ನಿಯೋಗದ ಜತೆ ಸಭೆ ನಡೆಸಿದ ಸಚಿವ ಗಡ್ಕರಿ ವಿಪರೀತ ಮಳೆಯಿಂದಾಗಿ ಚಾರ್ಮಾಡಿ ಮತ್ತು ಶಿರಾಡಿ ಘಾಟಿಗಳಲ್ಲಿ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಶೀಘ್ರದಲ್ಲೇ ತುರ್ತು ಕಾಮಗಾರಿ ನಡೆಸಿ, ವಾರದ ಒಳಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದೂ ಗಡ್ಕರಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿರುವ ಮಂಗಳೂರಿನ ಪಂಪ್ ವೆಲ್ ಮತ್ತು ತೊಕ್ಕೊಟ್ಟಿನಲ್ಲಿರುವ ಎರಡು ಮೇಲ್ಸೇತುವೆಗಳ ಕಾಮಗಾರಿಗಳನ್ನು ಮಳೆಗಾಲ ಮುಗಿದ ಬಳಿಕ (ಆಕ್ಟೊಬರ್ ನಂತರ) 3 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ನವಾಯುಗ್ ಕನ್ ಸ್ಟ್ರಕ್ಷನ್ ಸಂಸ್ಥೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆದೇಶ ನೀಡಿದ್ದಾರೆ.
ದೆಹಲಿಯಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೇತ್ರತ್ವದ ನಿಯೋಗದ ಜತೆ ಸಭೆ ನಡೆಸಿದ ಸಚಿವ ಗಡ್ಕರಿ, ಅಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಪೂರ್ಣಗೊಳ್ಳಲೇ ಬೇಕು. ಇದು ನಿಮ್ಮ ಜವಾಬ್ದಾರಿ ಎಂದು ಸಭೆಯಲ್ಲಿ ಹಾಜರಿದ್ದ ನವಾಯುಗ್ ಕನ್ ಸ್ಟ್ರಕ್ಷನ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಬಿ.ಸಿ ರೋಡ್ ನಿಂದ ಹಾಸನವರೆಗಿನ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 4 ಕಿಮೀ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣಕ್ಕೆ ರಾಜ್ಯ ಪರಿಸರ ಇಲಾಖೆ ಒಪ್ಪಿಲ್ಲ. ಈ ನಿಟ್ಟಿನಲ್ಲಿ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಕೇಂದ್ರದ ಅಧಿಕಾರಿಗಳು ಚರ್ಚೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕುಲಶೇಖರ, ಕಾರ್ಕಳ ಮತ್ತು ಶಿವಮೊಗ್ಗ ನಡುವಿನ ಚತುಷ್ಪಥ ಕಾಮಗಾರಿ ಯೋಜನೆಯ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ. ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳುವ ಭರವಸೆ ಕೇಂದ್ರ ಸಚಿವರಿಂದ ಸಿಕ್ಕಿದೆ ಎಂದು ನಳಿನ್ ತಿಳಿಸಿದ್ದಾರೆ. ಸಾಗರ್ ಮಲಾ ಯೋಜನೆ ಅಡಿಯಲ್ಲಿ ಬಿಸಿರೋಡ್, ಕಟೀಲು, ಮುಲ್ಕಿ, ಮೇಲ್ಕಾರ್, ಕೊಣಾಜೆ, ತೊಕ್ಕೊಟ್ಟು ನಡುವಿನ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಯ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದ್ದು, ಕಾಮಗಾರಿ ಪ್ರಾರಂಭಿಸುವಂತೆ ಕೇಳಿಕೊಂಡಿದ್ದೇವೆ.
ಬಿ.ಸಿ ರೋಡ್, ಮುಕ್ಕದಲ್ಲಿ ಕೇಂದ್ರ ಸರ್ಕಾರದ 2 ಟೋಲ್ ಗೇಟ್ ಗಳಿದ್ದು, ಇವುಗಳನ್ನು ಸ್ಥಗಿತಗೊಳಿಸಬೇಕು ಎಂದು ಕೇಳಿಕೊಂಡಿದ್ದೇವೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸಚಿವರು ಪ್ರತಿಕ್ರಿಯಿಸಿರುವುದಾಗಿ ಕಟೀಲ್ ವಿವರಿಸಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಉತ್ತರದ ಶಾಸಕ ಡಾ. ಭರತ್ ಶೆಟ್ಟಿ, ಪುತ್ತೂರು ಶಾಸಕ ಸಂಜೀವ ಮಟಂದೂರು ಸುಳ್ಯ ಶಾಸಕ ಎಸ್. ಅಂಗಾರ ನಿಯೋಗದಲ್ಲಿದ್ದರು.