LATEST NEWS
ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಅ.3 ರಿಂದ 90ನೇ ವರ್ಷದ ನವರಾತ್ರಿ ಮತ್ತು ಪುತ್ತೂರು ಶಾರದೋತ್ಸವ ಸಂಭ್ರಮ
ಪುತ್ತೂರು: ಪುರಾಣ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಅ.3 ರಿಂದ 12 ರ ವರೆಗೆ 90ನೇ ವರ್ಷದ ನವರಾತ್ರಿ ಮತ್ತು ಪುತ್ತೂರು ಶಾರದೋತ್ಸವ ಸಂಭ್ರಮ ನಡೆಯಲಿದ್ದು ಇದಕ್ಕೆ ಬೇಕಾದ ಸಿದ್ದತೆಗಳು ಪೂರ್ಣಗೊಂಡಿವೆ.
ಮೈಸೂರು, ಮಡಿಕೇರಿ, ಕುದ್ರೋಳಿಯಂತೆ ವೈಭವದಿಂದ ಕೂಡಿರುವ ನವರಾತ್ರಿ ಉತ್ಸವಗಳು ಪುತ್ತೂರಿನಲ್ಲಿ ಗತಕಾಲದಲ್ಲೇ ನಡೆಯುತ್ತಿದ್ದು, ಕಾಲಾಂತರದಲ್ಲಿ ವೈಭವ ಕಳೆದುಕೊಂಡಾಗ ಕಳೆದ ವರ್ಷದಿಂದ ಮತ್ತೆ ಗತಕಾಲದ ವೈಭವವನ್ನು ಮರುಸೃಷ್ಟಿಸಿ ಇದೀಗ 90ನೇ ವರ್ಷದ ನವರಾತ್ರಿ ಉತ್ಸವ ಮತ್ತು ಪುತ್ತೂರು ಶಾರದೋತ್ಸವವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.3 ರಿಂದ 12ರ ತನಕ ವೈಭವದಿಂದ ಜರುಗಲಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.11ಕ್ಕೆ ಧಾರ್ಮಿಕ ಸಭೆಯ ಬಳಿಕ ಅ.12ರಂದು ವೇದಘೋಷ, ಚೆಂಡೆಮೇಳ, ವಾದ್ಯಘೋಷ, ವಾದ್ಯವೃಂದ, ಕುಣಿತ ಭಜನೆಗಳೊಂದಿಗೆ ಶೋಭಾಯಾತ್ರೆಯ ಮೂಲಕ ಸಂಪನ್ನಗೊಳ್ಳಲಿದೆ.
ಶ್ರೀ ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಹಲವಾರು ಪವಾಡಗಳನ್ನು ಕಂಡಿರುವ ಪುತ್ತೂರು ಶಾರದಾ ಭಜನಾ ಮಂದಿರ ಕಳೆದ ವರ್ಷ ಗತಕಾಲದ ವೈಭವವನ್ನು ಮರುಕಳಿಸುವ ಜೊತೆಗೆ ಬಹಳ ವಿಜೃಂಭಣೆಯಿಂದ ಶಾರದೋತ್ಸವ ನಡೆದಿದೆ.ಈ ಭಾರಿ ಶಾರದೋತ್ಸವಕ್ಕೆ ಮೂರು ಪಟ್ಟು ಹೆಚ್ಚಿನ ಮೆರುಗಿನಿಂದ ವಿಜೃಂಭವಿಸಲಿದೆ ಎಂದು ಅವರು ಹೇಳಿದರು.
ಅ.3ರಂದು ನವರಾತ್ರಿ ಪೂಜೆ ಆರಂಭಗೊಳ್ಳಲಿದೆ. ಅಂದು ಅಕ್ಷರಯಜ್ಞ ಸೇವೆಗಾಗಿ ಭಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುವುದು. ಅ.9 ರಂಂದು ಬೆಳಿಗ್ಗೆ ಗಂಟೆ 10ಕ್ಕೆ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ ‘ಅಕ್ಷರಯಜ್ಞ’ ಸರಸ್ವತೀ ಪೂಜೆ ನಡೆಯಲಿದೆ. ಅ.10ರಂದು ಬೆಳಿಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಲಿದೆ. ಅ.12ರಂದು ಬೆಳಿಗ್ಗೆ ಗಂಟೆ 9 ರಿಂದ ಅಕ್ಷರಾಭ್ಯಾಸ, ಸಂಜೆ ಗಂಟೆ 5ಕ್ಕೆ ಶೋಭಾಯಾತ್ರೆ, ವಿಗ್ರಹ ಜಲಸ್ಥಂಭನ ನಡೆಯಲಿದೆ. ಪ್ರತಿ ದಿನ ಸಂಜೆ ಗಂಟೆ 4 ರಿಂದ 7.30ರ ತನಕ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಗಂಟೆ 7.30 ರಿಂದ ಭಜನೆ, ರಾತ್ರಿ ಗಂಟೆ 8.30ಕ್ಕೆ ಮಹಾಪೂಜೆ, ಮಂಗಳ, ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಲಾಗುವುದು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ಹೆಚ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಶಾರದಾ ಭಜನಾ ಮಂದಿರದ ನಿಕಟಪೂರ್ವ ಅಧ್ಯಕ್ಷ ಸಾಯಿರಾಮ್ ರಾವ್, ಮಿತ್ರಂಪಾಡಿ ಜಯರಾಮ ರೈ (ಅಬುದಾಬಿ), ಚನಿಲ ತಿಮ್ಮಪ್ಪ ಶೆಟ್ಟಿ, ಸಹಜ್ ರೈ ಬಳಜ್ಜ, ಡಾ. ಗೌರಿ ಪೈ, ಕೂರೇಲು ಸಂಜೀವ ಪೂಜಾರಿ, ಸೂರಜ್ ನಾಯರ್, ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ನವೀನ್‌ಚಂದ್ರ ಪುನರ್ವಸು, ರವಿ ಎಂ.ಶೆಟ್ಟಿ ಮೂಡಂಬೈಲು(ಕತಾರ್), ಹರಿಣಿ ಪುತ್ತೂರಾಯ, ಕೃಷ್ಣ ಎಂ.ಅಳಿಕೆ, ಕೆದಂಬಾಡಿಗುತ್ತು ರತ್ನಾಕರ ರೈ, ಶಶಾಂಕ ಕೊಟೇಚಾ, ಮುರಳೀಕೃಷ್ಣ ಕುಕ್ಕುಪುಣಿ, ಶಶಿಕಲಾ ಸೋಮನಾಥ್ ರಾವ್, ವಿಜಯಲಕ್ಷ್ಮೀ ನಟ್ಟೋಜರವರು ಗೌರವ ಉಪಸ್ಥಿತಿಯಲ್ಲಿರುತ್ತಾರೆ ಎಂದು ಹೇಳಿದರು.
ಅ.3 ರಿಂದ ಅ.11ರ ತನಕ ಪ್ರತಿ ದಿನ ಸಂಜೆ ಗಂಟೆ 4 ರಿಂದ 7.30 ರ ತನಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.3ರಂದು ಪಡುಮಲೆ ಮದುಮಿತಾ ರಾವ್ ಅವರಿಂದ ವೀಣಾ ವಾದನ ಬಳಿಕ ದರ್ಬೆ ಸಮೃದ್ಧಿ ಮ್ಯೂಸಿಕಲ್ಸ್ ವತಿಯಿಂದ ಸುಗಮ ಸಂಗೀತ, ಅ.4ಕ್ಕೆ ಕುಶಲ ಹಾಸ್ಯ ಬಳಗದಿಂದ ಹಾಸ್ಯ ಸಂಜೆ, ಬಳಿಕ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಯಕ್ಷಗಾನ ತಾಳಮದ್ದಳೆ ‘ಗರುಡ ಗರ್ವ ಭಂಗ’. ಅ.5ಕ್ಕೆ ವಿದುಷಿ ಸುಚಿತ್ರಾ ಹೊಳ್ಳ ಅವರ ಶಿಷ್ಠೆಯರಾದ ಸುಪ್ರಜಾ ರಾವ್, ಸುಮಾನ ರಾವ್ ಅವರಿಂದ ಅದಾದ ಬಳಿಕ ಸರ್ಪಂಗಳ ಮಹಿಮಾ ಭಟ್ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅ.6ಕ್ಕೆ ಉಲಾಂಡಿ ಖುಷಿ ಅನಿಲ್ ದೇವಾಡಿಗ ಅವರಿಂದ ಸುಗಮ ಸಂಗೀತ, ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ‘ಶ್ರೀ ದೇವಿ ಕೌಶಿಕೆ’. ಅ.7ಕ್ಕೆ ಶಿವಸ್ವರ ಸುಗಮ ಸಂಗೀತಾ ಶಾಲಾ ವಿದ್ಯಾರ್ಥಿಗಳಿಂದ ಭಕ್ತಿ ಭಾವ ಗಾನ ‘ಸಂಗೀತ ಸಂಭ್ರಮ’, ಯಕ್ಷಕೂಟ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ‘ಶ್ರೀ ಕೃಷ್ಣ ಪಾರಿಜಾತ’, ಅ.8ಕ್ಕೆ ವಿದುಷಿ ಸ್ವರ್ಣ ಎನ್ ಭಟ್ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಇವರಿಂದ ಯಕ್ಷಗಾನ ತಾಳಮದ್ದಳೆ ‘ಚಿತ್ರಸೇನ ಕಾಳಗ’, ಅ.9ಕ್ಕೆ ಪಟ್ಟಾಭಿರಾಮ ಸುಳ್ಯ ಇವರಿಂದ ನಗೆ ಹಬ್ಬ, ಗಾನಸಿರಿ ಕಲಾ ಕೇಂದ್ರ ಪುತ್ತೂರು ಇವರಿಂದ ಸುಮಧುರ ಸಂಗೀತ ಲಹರಿ, ಅ.10ಕ್ಕೆ ಭಾವನಾ ಕಲಾ ಆರ್ಟ್ಸ್ ಬೊಳುವಾರು ತಂಡದ ಕಲಾವಿದರಿಂದ ವಿಶ್ಲೇಶ ವಿಶ್ವಕರ್ಮ ನಿರ್ದೇಶನದಲ್ಲಿ ಸಾಂಸ್ಕೃತಿಕ ಕಲಾ ವೈಭವ, ಹರಿಣಿ ಗೌಡ ಸಾರಥ್ಯದ ಆರೋಹಣ ಮ್ಯೂಸಿಕ್ಸ್‌ನಿಂದ ಒಂದು ಬಾರಿ ಸ್ಮರಣೆ ಸಾಲದೇ ಕಾರ್ಯಕ್ರಮ, ಅ.11ಕ್ಕೆ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಬಯಲಾಟ ‘ಶಾಂಭವಿ ವಿಲಾಸ’ ನಡೆಯಲಿದೆ ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಹೇಳಿದರು.
ಅ.11ಕ್ಕೆ ಸಂಜೆ ಧಾರ್ಮಿಕ ಸಭೆ:
ಅ.11ಕ್ಕೆ ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ದೀಪಪ್ರಜ್ವಲನೆ ಮಾಡಲಿದ್ದಾರೆ. ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ ತಂತ್ರಿಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶಾರದಾ ಭಜನಾ ಮಂದಿರದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಗೌರವಿಸಲಾಗುವುದು ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.
ಮೆರವಣಿಗೆಯಲ್ಲಿ ಸ್ತಬ್ದಚಿತ್ರಗಳಿರುವುದಿಲ್ಲ. ಬದಲಾಗಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ಜೋಡಿಸಲಾಗುತ್ತದೆ. ಅವೆಲ್ಲ ನಿಗದಿ ಪಡಿಸಿದ ಸ್ಥಳದಲ್ಲಿ ಪ್ರದರ್ಶನ ನೀಡಲಾಗುತ್ತದೆ. ಬೊಳುವಾರು ವೃತ್ತ
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ, ಇನ್‌ಲ್ಯಾಂಡ್ ಮಯೂರ, ಶ್ರೀಧರ್ ಭಟ್ ಬ್ರದರ್ಸ್, ಪ್ರಧಾನ ಅಂಚೆ ಕಚೇರಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಸಂಜೀವ ಶೆಟ್ಟಿ ಅಂಗಡಿ ಬಳಿ, ಕೆ.ಎಸ್.ಆರ್.ಟಿ.ಸಿ
ಬಸ್‌ನಿಲ್ದಾಣದ ಬಳಿ, ಅರುಣಾ ಕಲಾ ಮಂದಿರ, ಕಲ್ಲಾರೆ, ಹರ್ಷ ಬಳಿ, ದರ್ಬೆ ವೃತ್ತ ಕಲಾ ತಂಡಗಳ ಪ್ರದರ್ಶನ ನಡೆಯಲಿದೆ ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಹೇಳಿದರು.
ಕಳೆದ ವರ್ಷ ಶಾರದೋತ್ಸವದ ಸಂದರ್ಭ ಪುತ್ತೂರು ಪೇಟೆಯಲ್ಲಿ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಸಾಗುವ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಈ ಬಾರಿಯೂ
ಅದು ಮುಂದುವರಿಯಲಿದೆ. ಕಳೆದ ವರ್ಷ ವೈಭವದ ಕಾರ್ಯಕ್ರಮ ಆಯೋಜನೆ ಮಾಡಿದ ಸಂದರ್ಭದಲ್ಲೇ ನಮಗೆ ಆರ್ಥಿಕವಾಗಿ ಹಣವೂ ಉಳಿಕೆಯಾಗಿದೆ. ಇದು ಶಾರದಾ ಮಾತೆಯ ಪವಾಡ
ಆಗಿದೆ. ಹಾಗಾಗಿ ಈ ಬಾರಿಯೂ ವೈಭವದಿಂದ ಪುತ್ತೂರು ಶಾರದೋತ್ಸವ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಡಿ.ಜೆ ಮತ್ತು ಪಟಾಕಿ ನಿಷೇಧಿಸಲಾಗಿದೆ. ಭಜನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಶಾರದಾ ಮಾತೆಯ ವಿಗ್ರಹ ಜಲಸ್ಥಂಭನವನ್ನೂ ಕಳೆದ ಬಾರಿಯಂತೆ ವಿಶೇಷ ಯಂತ್ರದ ಮೂಲಕ ಹಂತ ಹಂತವಾಗಿ ನೀರಿಗೆ ಇಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಶ್ರೀ ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಹೊರೆಕಾಣಿಕೆ ಸಮಿತಿ ಸಂಚಾಲಕ ರಾಜೇಶ್ ಬನ್ನೂರು, ಶೋಭಾಯಾತ್ರೆಯ ಸಂಚಾಲಕ ನವೀನ್ ಕುಲಾಲ್, ಡಾ. ಸುರೇಶ್ ಪುತ್ತೂರಾಯ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಉಪಸ್ಥಿತರಿದ್ದರು..