LATEST NEWS
ಬ್ರಿಟನ್ ನಲ್ಲಿ ಮುಂದಿನ ವಾರದಿಂದ ಜನರಿಗೆ ಕೊರೊನಾ ಲಸಿಕೆ
ಲಂಡನ್ : ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾಗೆ ಕೊನೆಗೂ ಲಸಿಕ ಲಭ್ಯವಾಗಿದೆ. ಅಮೇರಿಕಾದ ಪೈಜರ್ ಕಂಪೆನಿ ಅಭಿವೃದ್ದಿ ಪಡಿಸಿರುವ ಕೋಲಿಡ್ ಲಸಿಕೆ ಯನ್ನು ಲಂಡನ್ ಸರಕಾರ ಅನುಮೊದನೆ ನೀಡಿದ್ದು, ತೀರಾ ಅಗತ್ಯವಿರುವ ತನ್ನ ಪ್ರಜೆಗಳಿಗೆ ಮುಂದಿನವಾರದಿಂದ ಆರಂಭಿಸುವುದಾಗಿ ಬ್ರಿಟನ್ ಘೋಷಿಸಿದೆ.
ಕರೊನಾ ಲಸಿಕೆ ಅಭಿವೃದ್ಧಿ ವಿಚಾರದಲ್ಲಿ ಅಮೆರಿಕ ಮತ್ತು ಯುರೋಪನ್ನು ಹಿಂದಿಕ್ಕಿರುವ ಬ್ರಿಟನ್, ಕರೊನಾ ಲಸಿಕೆಗೆ ಅಧಿಕೃತ ಸಮ್ಮತಿ ನೀಡಿದ ಮೊದಲ ಪಾಶ್ಚಿಮಾತ್ಯ ದೇಶವೆನಿಸಿದೆ. ಫೈಜರ್ ಲಸಿಕೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿರುವುದು ಜಾಗತಿಕ ಜಯವಾಗಿದ್ದು, ಕತ್ತಲ ನಡುವೆ ಮೂಡಿದ ಆಶಾವಾದದ ಬೆಳಕಿನ ಕಿರಣವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವರ್ಣಿಸಿದ್ದಾರೆ.
ಬ್ರಿಟನ್ನ ಔಷಧಗಳು ಮತ್ತು ಆರೋಗ್ಯರಕ್ಷಣೆ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್ಆರ್ಎ), ಫೈಜರ್-ಬಯೋಎನ್ಟೆಕ್ ಲಸಿಕೆ ಬಳಸಲು ತುರ್ತು ಅನುಮತಿ ನೀಡಿದೆ. ಈ ಲಸಿಕೆ ದಾಖಲೆಯ ಕೇವಲ 23 ದಿನಗಳಲ್ಲಿ ಕರೊನಾ ವೈರಸ್ ವಿರುದ್ಧ ಪರಿಣಾಮ ಬೀರಿರುವುದಾಗಿ ಫೈಜರ್-ಬಯೋಎನ್ಟೆಕ್ ಘೋಷಿಸಿವೆ. ಮಾನವರ ಮೇಲಿನ ಪ್ರಯೋಗದ ಫಲಿತಾಂಶದ ದತ್ತಾಂಶವನ್ನು ಕಂಪನಿ ಪ್ರಕಟಿಸಿದೆ. ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಸಮ್ಮತಿಸಿರುವುದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಐತಿಹಾಸಿಕ ಕ್ಷಣ ಎಂದು ಫೈಜರ್ ಹೇಳಿದೆ. ಇದಕ್ಕೆ 800 ರೂ.ಗಿಂತ ಕಡಿಮೆ ದರ ಇರುವ ಸಾಧ್ಯತೆ ಇದ್ದು, 2 ಕೋಟಿ ಜನರಿಗಾಗುವಷ್ಟು ಲಸಿಕೆಗೆ ಬ್ರಿಟನ್ ಸರ್ಕಾರ ಬೇಡಿಕೆ ಇಟ್ಟಿದೆ.
ಇನ್ನು ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಮಾನವರ ಮೇಲಿನ ಪರೀಕ್ಷೆ ಪ್ರಕ್ರಿಯೆ ಆರಂಭವಾಗಿದೆ. ಸದ್ಯ ದೇಶದ 3 ಕಡೆ ಕರೊನಾ ಲಸಿಕೆ ಸಿದ್ಧವಾಗುತ್ತಿದೆ. ಜೈಡುಸ್ ಬಯೋಟೆಕ್ನ ಜೈಕೋವಿಡ್ ಲಸಿಕೆ, ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಹಾಗೂ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಟ್ಟಿವೆ. ಈ ಪೈಕಿ ಕೋವಿಶೀಲ್ಡ್ ಶೇ.90, ಕೋವ್ಯಾಕ್ಸಿನ್ ಶೇ.95 ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. 2021ರ ಫೆಬ್ರವರಿ ವೇಳೆಗೆ ಲಸಿಕೆ ಸಿಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.
ಈ ನಡುವೆ ಫೈಜರ್ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸುವುದು ಅಗತ್ಯವಾದ್ದರಿಂದ ಸದ್ಯಕ್ಕೆ ಇದು ಭಾರತಕ್ಕೆ ಸಿಗುವುದಿಲ್ಲ. ಲಸಿಕೆಗೆ ಶೀತ ವಾತಾವರಣದ ಅಗತ್ಯ ಬೇಕಿಲ್ಲ ಎಂಬ ಕಾರಣಕ್ಕೆ ಭಾರತ ಇತರ ದೇಶಗಳ ಸಹಯೋಗದಲ್ಲಿ ಇತರ ಲಸಿಕೆಗಳತ್ತ ಚಿತ್ತ ಹರಿಸಿದೆ. ಅದಾಗ್ಯೂ ಮುಂದಿನ ದಿನಗಳಲ್ಲಿ ಫೈಜರ್ ಖರೀದಿಸುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ.