Connect with us

    BANTWAL

    ದಕ್ಷಿಣ ಕನ್ನಡದಿಂದ ಲೋಕಸಭೆಗೆ ಈ ಮೂವರಲ್ಲಿ ಯಾರು ಹಿತವರು..!!?

    ಪುತ್ತೂರು : ಕರ್ನಾಟಕದಲ್ಲಿ ಸದ್ಯ ಬಿಜೆಪಿಯ ಅತ್ಯಂತ ಸುಭದ್ರ ಲೋಕಸಭಾ ಕ್ಷೇತ್ರವೆಂದರೆ ಅದು ದಕ್ಷಿಣ ಕನ್ನಡ ಮತ್ತು ಬಿಜೆಪಿ ಫೆವರಿಟ್ ಕ್ಷೇತ್ರ ಕೂಡ ಹೌದು. ಈ ಹಿಂದೆ ಮಂಗಳೂರು ಆಗಿದ್ದಾಗಲೂ, ಈಗ ದಕ್ಷಿಣ ಕನ್ನಡ ಆಗಿರುವಾಗಲೂ ಬಿಜೆಪಿ ಇಲ್ಲಿ ಸತತ ಗೆಲುವಿನ ನಗೆ ಬೀರುತ್ತಾ ಬಂದಿದೆ. ಪ್ರತಿ ಬಾರಿ ಸರ್ವಾನುಮತದ ಅಭ್ಯರ್ಥಿ ಆಯ್ಕೆ ದಕ್ಷಿಣ ಕನ್ನಡದ ವಿಶೇಷತೆ. ಆದ್ರೆ ಈ ಬಾರಿ ಮಾತ್ರ ಭದ್ರ ಕೊಟೆಯ ಬಿಜೆಪಿ ಒಳಗೆ ಟಿಕೆಟ್ ಗಾಗಿ ಪೈಪೋಟಿ ಪ್ರಾರಂಭವಾಗಿದೆ.

    ಇಬ್ಬರು ಪ್ರಬಲ ಹಿಂದೂ ಮುಖಂಡರು ಲೋಕಸಭಾ ಟಿಕೆಟ್ ಗಾಗಿ ಅಖಾಡಕ್ಕಿಳಿದಿದ್ದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.. ಇಲ್ಲಿ ಯಾರೇ ನಿಂತರೂ ಗೆಲವು ಸುಲಭ ಅನ್ನೊ ಮಾತು ಇದೆ. ಕಳೆದ 32 ವರ್ಷಗಳಿಂದ ಈ ಕ್ಷೇತ್ರವನ್ನು ಬಿಜೆಪಿ ತನ್ನ ಹತ್ರಾನೇ ಉಳಿಸಿಕೊಂಡಿದ್ದು, ಕಾಂಗ್ರೇಸ್ ಅಭ್ಯರ್ಥಿಗಳೂ ಯಾವುದೇ ರೀತಿಯಲ್ಲೂ ಪೈಪೋಟಿ ನೀಡದ ಹಾಗೆ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದೆ. ಆದರೆ ಇದೀಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ತಮ್ಮ ಭದ್ರಕೋಟೆ ಎಂದು ಬೀಗುತ್ತಿದ್ದ ಬಿಜೆಪಿಗೆ ಇದೀಗ ತಮ್ಮದೇ ಪಕ್ಷದ ಮುಖಂಡರ ಬಂಡಾಯ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಒಂದು ಕಡೆ ಸತ್ಯಜಿತ್ ಸುರತ್ಕಲ್ ಇನ್ನೊಂದು ಕಡೆ ಅರುಣ್ ಕುಮಾರ್ ಪುತ್ತಿಲ ಈ ಎರಡು ಹೆಸರು ಇದೀಗ ರಾಜ್ಯ ಬಿಜೆಪಿಯ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.

    ಯಾರೇ ಬಂಡಾಯ ನಿಂತರೂ ಹಿಂದುತ್ವ ಹಾಗೂ ಮೋದಿ ಹೆಸರು ಏನು ಮಾಡಲು ಆಗುವುದಿಲ್ಲ ಎಂದು ಹಾರಾಡುತ್ತಿದ್ದ ಬಿಜೆಪಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಸರಿಯಾದ ಬುದ್ದಿ ಕಲಿಸಿದ್ದಾರೆ. ಎಲ್ಲಿಯ ವರೆಗೂ ಅಂದರೆ ಪುತ್ತೂರು ಬಿಜೆಪಿಯ ಭದ್ರಕೋಟೆ ಅಲ್ಲಿಯೇ ಅದನ್ನು ಮೂರನೇ ಸ್ಥಾನಕ್ಕೆ ಕಳುಹಿಸುವಲ್ಲಿ ಅರುಣ್ ಕುಮಾರ್ ಪುತ್ತಿಲರ ಬಂಡಾಯ ಕಾರಣವಾಗಿತ್ತು.
    ಇದೀಗ ಲೋಕಸಭೆ ಚುನಾವಣೆ ಬಂದಿದೆ. ತಮ್ಮ ಸಂಘಟನೆಗಳ ಮುಖಂಡರ ಬಂಡಾಯ ತಣಿಸಲು ಯಾವುದೇ ಕೆಲಸ ಮಾಡದೇ ಸೈಲೆಂಟ್ ಆಗಿದ್ದ ಜಿಲ್ಲೆಯ ಬಿಜೆಪಿ ಮುಖಂಡರಿಗೆ ಇದೀಗ ಮತ್ತೆ ಬಂಡಾಯದ ಅಪಾಯ ಎದುರಾಗಿದೆ. ಜನ ಬಲ ಇರುವ ತಮ್ಮದೇ ಪಕ್ಷದ ಮುಖಂಡರು ಈ ರೀತಿಯಾಗಿ ತಿರುಗಿ ಬಿಳುತ್ತಾರೆ ಎಂದು ಬಿಜೆಪಿ ನಾಯಕರು ಕನಸು ಮನಸಿನಲ್ಲೂ ಯೋಚನೆ ಮಾಡಿಲ್ಲ. ಚುನಾವಣೆ ಗೆಲುವಿನ ಬಳಿಕ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿ ಮೆರೆದ ನಾಯಕರಿಗೆ ಸರಿಯಾಗೇ ಬುದ್ದಿಯನ್ನು ಕಾರ್ಯಕರ್ತರು ಕಲಿಸಿದ್ದಾರೆ.
    ಈಗಾಗಲೇ ಅರುಣ್ ಕುಮಾರ್ ಪುತ್ತಿಲ ತಾವು ಬಂಡಾಯವಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ. ತಮ್ಮ ಪುತ್ತಿಲ ಪರಿವಾರದ ಮೂಲಕ ಈಗಾಗಲೇ ಜಿಲ್ಲೆಯಾದ್ಯಂತ ಅರುಣ್ ಕುಮಾರ್ ಪುತ್ತಿಲ ತಮ್ಮ ಪ್ರಚಾರ ಆರಂಭಿಸಿದ್ದಾರೆ. ಹಿಂದೂ ಕಾರ್ಯಕರ್ತರಿಗೆ ಯಾವುದೇ ಸಮಸ್ಯೆ ಆದಲ್ಲಿ ಮೊದಲಿಗೆ ಬಂದು ನಿಲ್ಲುವ ಪುತ್ತಿಲ ಅವರ ಪರ ಒಂದು ದೊಡ್ಡ ಬೆಂಬಲಿಗರ ಗುಂಪೇ ಇದೆ. ಈಗಾಗಲೇ ಬಿಜೆಪಿ ಕೂಡ ಪುತ್ತಿಲರ ಮನವೊಲಿಸಲು ಪ್ರಯತ್ನಿಸಿತ್ತು, ಆದರೆ ಷರತ್ತುಗಳಿಗೆ ಬಿಜೆಪಿ ನಾಯಕರು ಒಪ್ಪದ ಕಾರಣ ಮಾತುಕತೆ ಮುರಿದು ಬಿದ್ದಿದೆ. ಆದರೂ ಇನ್ನೂ ಪುತ್ತಿಲ ಬಂಡಾಯ ಶಮನಕ್ಕೆ ಪ್ರಯತ್ನ ಮಂದುವರೆದಿದೆ.ಇನ್ನು ಸತ್ಯಜಿತ್ ಸುರತ್ಕಲ್ ದಶಕಗಳಿಂದ ಹಿಂದುತ್ವ ಸಂಘಟನೆಯ ಯುವಪಡೆ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅಯೋಧ್ಯೆ ಕರಸೇವೆ ಸೇರಿದಂತೆ ಹಲವಾರ ಹೋರಾಟಗಳಲ್ಲಿ ಭಾಗವಹಿಸಿದ್ದ ಅವರು, ಒಂದು ಕಾಲದಲ್ಲಿ ಜಿಲ್ಲೆಯ ಪ್ರಮುಖ ಹಿಂದೂ ಸಂಘಟನೆ ನಾಯಕ ಅಲ್ಲದೆ ಎಂಪಿ ಹಾಗೂ ಎಂಎಲ್ ಎ ಟಿಕೆಟ್ ಗೆ ಅವರ ಹೆಸರು ಕೇಳಿ ಬರುತ್ತಿತ್ತು. ಆದರೆ ಸಮಯ ಕಳೆದಂತೆ ಸತ್ಯಜಿತ್ ಸುರತ್ಕಲ್ ಅವರನ್ನು ಮೂಲೆಗುಂಪು ಮಾಡಿದ್ದು, ಹಲವು ಚುನಾವಣೆಗಳಲ್ಲಿ ಸ್ಪರ್ಧೆಗೆ ಟಿಕೆಟ್ ಕೇಳಿದಾಗ ಅವರನ್ನು ಮಾತುಕತೆ ನಡೆಸಿ ಬಿಜೆಪಿ ಹೈಕಮಾಂಡ್ ಸೈಲೆಂಟ್ ಮಾಡುತ್ತಿದ್ದರು. ಆದರೆ ಈ ಬಾರಿ ಮಾತ್ರ ಸತ್ಯಜಿತ್ ಸುರತ್ಕಲ್ ತಿರುಗಿ ಬೀಳುವ ಲಕ್ಷಣ ಕಾಣಿಸುತ್ತಿದೆ. ತಾನು ಬಿಜೆಪಿಯಿಂದ ಲೋಕಸಭೆ ಸ್ಪರ್ಧೆಗೆ ಆಕಾಂಕ್ಷಿ ಎಂದ ಅವರು ಬಿಜೆಪಿ ಮುಖಂಡರ ಮಾತುಕತೆಗೆ ಬಗ್ಗದೆ ಕಾರ್ಯಕರ್ತರ ವಿಶ್ವಾಸಗಳಿಸಲು ಸಭೆಗಳನ್ನು ನಡೆಸುತ್ತಿದ್ದಾರೆ. ಒಟ್ಟಾರೆಯಾಗಿ ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರ ಕೋಟೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ  ಲೋಕಸಭಾ ಟಿಕೆಟ್  ಸಿಕ್ಕರೂ  ಯಾರೇ ಅಭ್ಯರ್ಥಿ ಜಯಗಳಿಸಲು ಕಾರ್ಯಕರ್ತರ ಬೆಂಬಲ ಅತೀ ಅಗತ್ಯವಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *