WORLD
ಮಾಜಿ ಕ್ರಿಕೆಟಿಗ ಶಹೀದ್ ಅಫ್ರಿದಿಗೆ ಕೊರೊನಾ ಪಾಸಿಟಿವ್
ಪಾಕಿಸ್ಥಾನದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಕೆಯಲ್ಲಿ…!!
ಕರಾಚಿ, ಜೂನ್ 13: ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಹೀದ್ ಅಫ್ರಿದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಶಹೀದ್ ಅಫ್ರಿದಿಯೇ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
“ನನಗೆ ಗುರುವಾರದಿಂದ ಸ್ವಲ್ಪ ಹುಷಾರಿಲ್ಲ. ಶರೀರ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿ ಕೋವಿಡ್ ಟೆಸ್ಟ್ ಮಾಡಿದ್ದೆ. ದುರದೃಷ್ಟವಶಾತ್ ಕೋವಿಡ್ ಪಾಸಿಟಿವ್ ಆಗಿದ್ದೇನೆ. ಆದಷ್ಟು ಬೇಗ ಹುಷಾರಗಲು ಪ್ರಾರ್ಥಿಸಿ. ಇನ್ಶಾ ಅಲ್ಲಾ..” ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.
ಪಾಕಿಸ್ಥಾನ ತಂಡದ ಹೊಡೆಬಡಿಯ ದಾಂಡಿಗನಾಗಿದ್ದ ಅಫ್ರಿದಿ, ಕ್ರಿಕೆಟ್ ಆಟದಿಂದ ನಿವೃತ್ತಿಯಾದ ಬಳಿಕ ಚಾರಿಟಿ ಕೆಲಸಗಳಲ್ಲಿ ಬಿಝಿಯಾಗಿದ್ದರು. ಇತ್ತೀಚೆಗೆ ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ದ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದರು.
ಇತ್ತೀಚೆಗೆ ಪಾಕ್ ತಂಡದ ಮಾಜಿ ಕ್ರಿಕೆಟಿಗ ತೌಫಿಕ್ ಉಮರ್ ಕೂಡ ಕೊರೊನಾ ಪೀಡಿತರಾಗಿದ್ದರು. ಬಳಿಕ ಈ ತಿಂಗಳ ಆರಂಭದಲ್ಲಿ ರಿಕವರಿ ಆಗಿದ್ದರು. ಕೆಟ್ಟ ಸುದ್ದಿಯಂದ್ರೆ, ಕೊರೊನಾ ಸೋಂಕಿನಿಂದ ಪಾಕ್ ನಲ್ಲಿ ಇಬ್ಬರು ಪ್ರಥಮ ದರ್ಜೆ ಕ್ರಿಕೆಟಿಗರು ಸಾವು ಕಂಡಿದ್ದಾರೆ. ಲೆಗ್ ಸ್ಪಿನ್ನರ್ ಆಗಿದ್ದ ರಿಯಾಜ್ ಶೇಖ್ ಕರಾಚಿಯಲ್ಲಿ ಮೃತಪಟ್ಟಿದ್ದರೆ, ಝಫಾರ್ ಅರ್ಫ್ರಾಜ್ ಪೇಶಾವರದಲ್ಲಿ ಎಪ್ರಿಲ್ ತಿಂಗಳಲ್ಲಿ ಸಾವನ್ನಪ್ಪಿದ್ದರು.