KARNATAKA
ನಷ್ಟದಲ್ಲೇ ಮುಗಿದ ಮೀನುಗಾರಿಕಾ ಋತು
ನಷ್ಟದಲ್ಲೇ ಮುಗಿದ ಮೀನುಗಾರಿಕಾ ಋತು
ಮಂಗಳೂರು ಜೂನ್ 1: ಕರಾವಳಿಯಲ್ಲಿ ಈ ಬಾರಿಯ ಮೀನುಗಾರಿಕೆ ಋತು ಅಂತ್ಯಗೊಂಡಿದ್ದು, ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರಿಕೆ ಸಂಪೂರ್ಣ ಬಂದ್ ಆಗಲಿದ್ದು, ಮೀನುಗಾರರಿಗೆ ವಿರಾಮದ ಸಮಯ.
ಈ ಬಾರಿಯ ಮೀನುಗಾರಿಕಾ ಋತು ಸಂಪೂರ್ಣ ನಷ್ಟದಲ್ಲೆ ಮುಗಿಸಲಾಗಿದ್ದು, ಮಲ್ಪೆಯ ಆಳಸಮುದ್ರಕ್ಕೆ ತೆರಳಿದ ಮೀನುಗಾರರ ನಾಪತ್ತೆ ಪ್ರಕರಣ ಈ ಬಾರಿಯ ಮೀನುಗಾರಿಕಾ ಋತುವಿನಲ್ಲಿ ನಡೆದ ದುರಾದೃಷ್ಠಕರ ಘಟನೆಯಾಗಿದೆ.
ಕರಾವಳಿಯಲ್ಲಿ ಈ ವರ್ಷ ಒಟ್ಟು 3,166 ಕೋಟಿ ರೂ. ಮೌಲ್ಯದ 2,77,747 ಟನ್ ಮೀನು ಹಿಡಿಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮೀನುಗಾರಿಕೆ ಪ್ರಮಾಣ ಮತ್ತು ಮೌಲ್ಯ ಕುಸಿದು, ಸುಮಾರು 70 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ.
ಹೆಚ್ಚು ಬೇಡಿಕೆಯಿಲ್ಲದ ಒಂದೇ ಜಾತಿಯ ಮೀನು ಲಭ್ಯವಾಗಿರುವುದು ಮತ್ತು ವಿವಿಧ ಕಾರಣಗಳಿಗೆ ದೋಣಿಗಳು ಸಮುದ್ರಕ್ಕಿಳಿಯಲು ಸಾಧ್ಯವಾಗದಿರುವುದು ಆದಾಯ ಕುಸಿತಕ್ಕೆ ಕಾರಣ ಎಂದು ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.
ಈ ಋತುವಿನಲ್ಲಿ ಬಂಗುಡೆ, ಬೂತಾಯಿ, ಕೊಡ್ಡಾಯಿ, ಅಂಜಲ್ ದೊರೆತಿರುವುದು ಕಡಿಮೆ. ಕಪ್ಪು ಬಣ್ಣದ ಕ್ಲಾಟಿ ಮೀನು ಸಿಕ್ಕಿದ್ದೇ ಹೆಚ್ಚು. ಜತೆಗೆ ಮದ್ಮಾಲ್ ಮೀನು ಸಿಕ್ಕಿವೆ ಎನ್ನುತ್ತಾರೆ ಮೀನುಗಾರರು.
ಕರ್ನಾಟಕ ಕರಾವಳಿ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ವಯ 61 ದಿನ ಮೀನುಗಾರಿಕೆ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಬಲೆ, ಸಾಧನಗಳನ್ನು ಉಪಯೋಗಿಸಿ, ಎಲ್ಲ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮೀನುಗಾರಿಕೆ ಚಟುವಟಿಕೆ ನಿಷೇಧಿಸಲಾಗಿದೆ. ದೋಣಿ ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿವರೆಗಿನ ಸಾಮರ್ಥ್ಯದ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ/ನಾಡದೋಣಿಗಳು ಕರಾವಳಿ ಮೀನುಗಾರಿಕೆ ಕೈಗೊಳ್ಳಲು ಅನುಮತಿ ನೀಡಲಾಗಿದೆ.
ನಿಷೇಧ ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ. ಕರಾವಳಿ ಪ್ರದೇಶದ ಎಲ್ಲ ಮೀನುಗಾರರ ಹಿತದೃಷ್ಟಿ ಗಮನದಲ್ಲಿರಿಸಿ ಆದೇಶ ಹೊರಡಿಸಿರುವುದರಿಂದ ಮೀನುಗಾರರು ಸರ್ಕಾರದೊಂದಿಗೆ ಸಹಕರಿಸಬೇಕೆಂದು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.