LATEST NEWS
ಇನ್ನು ಮೀನುಗಾರಿಕಾ ಇಲಾಖೆಯಿಂದ ಮೀನಿನ ಹೋಟೆಲ್ – ಕೋಟ ಶ್ರೀನಿವಾಸ ಪೂಜಾರಿ

ಇನ್ನು ಮೀನುಗಾರಿಕಾ ಇಲಾಖೆಯಿಂದ ಮೀನಿನ ಹೋಟೆಲ್ – ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು ನವೆಂಬರ್ 21: ರಾಜ್ಯದ ಜನ ಅಗ್ಗದ ಮತ್ತು ತಾಜಾ ಮೀನು ತಿನ್ನಬೇಕು ಎನ್ನುವ ಕಾರಣಕ್ಕಾಗಿ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೀನುಗಾರಿಕಾ ಇಲಾಖೆ ವತಿಯಿಂದ ಮೀನಿನ ಹೋಟೇಲ್ ಪ್ರಾರಂಭಿಸಲಾಗುವುದು ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ರಾಜ್ಯದಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿಗೆ ತರಲು ಸರಕಾರ ಚಿಂತನೆ ನಡೆಸಿದೆ ಎಂದರು.

ರಾಜ್ಯದಲ್ಲಿ ಮೀನುಗಾರಿಕೆಗೆ ಬೇಕಾದ ಸೌಲಭ್ಯ, ಹೊರ ರಾಜ್ಯದ ಮೀನುಗಾರರಿಂದ ರಾಜ್ಯದ ಮೀನುಗಾರರು ಅನುಭವಿಸುತ್ತಿರುವ ಸಂಕಷ್ಟ ಹೀಗೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನವನ್ನು ಈ ಸಮಗ್ರ ನೀತಿಯ ಮೂಲಕ ಮಾಡಲಾಗುವುದು ಎಂದರು.
ಮೀನುಗಾರಿಕಾ ಇಲಾಖೆ ಈಗಾಗಲೇ ರಾಜ್ಯದಾದ್ಯಂತ ತಾಜಾ ಮೀನು ಮಾರಾಟ ಕೇಂದ್ರಗಳನ್ನು ತೆರೆದಿದ್ದು, ಈ ವರ್ಷ ರಾಜ್ಯದ ಜನ ತಾಜಾ ಮೀನನ್ನು ಕಡಿಮೆ ರೇಟ್ ನಲ್ಲಿ ತಿನ್ನಬೇಕು ಎನ್ನುವ ದೃಷ್ಟಿಯಿಂದ ಮೀನಿನ ಹೋಟೆಲ್ ಪ್ರಾರಂಭಿಸಲಾಗುವುದು ಎಂದರು.
ಪ್ರಮುಖವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೀನಿನ ಹೋಟೆಲ್ ಪ್ರಾರಂಭಿಸಲಾಗುವುದು ಎಂದ ಅವರು ಬೇಡಿಕೆ ಇದ್ದ ತಾಲೂಕು ಕೇಂದ್ರಗಳಲ್ಲೂ ಮೀನಿನ ಹೋಟೆಲ್ ಪ್ರಾರಂಭಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.