KARNATAKA
ಸದ್ದಿಲ್ಲದೆ ನಡೆಯಿತು ವಿತ್ತ ಸಚಿವೆ ನಿರ್ಮಲಾ ಪುತ್ರಿಯ ಮದ್ವೆ! ಆಶೀರ್ವದಿಸಿದ ಅದಮಾರು ಶ್ರೀಗಳು
ಬೆಂಗಳೂರು, ಜೂನ್ 09: ಈಗೆಲ್ಲ ಮದುವೆ ಎನ್ನುವುದೇ ಆಡಂಬರ, ಅದರಲ್ಲೂ ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿ ಇದ್ದುಬಿಟ್ಟರಂತೂ ಕೇಳುವುದೇ ಬೇಡ. ಕೋಟಿ ಕೋಟಿ ಹಣ ಸುರಿದು ಅದ್ಧೂರಿ ಮದುವೆ ಮಾಡಿಬಿಡುತ್ತಾರೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತ್ರ ಈ ಐಷಾರಾಮಿ ರೂಢಿಯನ್ನು ಮುರಿದು, ತಮ್ಮ ಮಗಳಿಗೆ ಮದುವೆ ಮಾಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಮಗಳು ಪರಕಾಲ ವಂಗಮಾಯಿ ಅವರು ಪ್ರತೀಕ್ ಅವರ ಜತೆ ಗುರುವಾರ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ವಿವಾಹ ಕಾರ್ಯಕ್ರಮ ಜರುಗಿದೆ. ಈ ವೇಳೆ ಹಾಜರಿದ್ದ ಉಡುಪಿಯ ಅದಮಾರು ಮಠದ ಶ್ರೀಗಳು ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಯಾವುದೇ ರಾಜಕಾರಣಿಯನ್ನು ಮದುವೆಗೆ ಆಮಂತ್ರಿಸದೆ ಕೆಲವೇ ಕೆಲವು ಬಂಧುಗಳು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ ಎಂದು ವರದಿಯಿದೆ.
ಬ್ರಾಹ್ಮಣ ಕುಟುಂಬದವರಾಗಿರುವ ನಿರ್ಮಲಾ ಅವರು ಬ್ರಾಹ್ಮಣ ಸಂಪ್ರದಾಯದಂತೆಯೇ ಮಗಳ ಮದುವೆ ನೆರವೇರಿಸಿದ್ದಾರೆ. ಉಡುಪಿಯ ಅದಮಾರು ಮಠದ ಆಶೀರ್ವಾದ ಮತ್ತು ಸೂಚನೆಗಳಂತೆ ಮದುವೆ ನಡೆಸಲಾಗಿದೆ. ಪರಕಾಲ ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಸ್ನಾತಕೋತ್ತರ ಪದವಿ ಮತ್ತು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪತ್ರಿಕೋದ್ಯಮದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ.
ಸದ್ಯ ಮಿಂಟ್ ಲೌಂಜ್‌ನಲ್ಲಿ ವಿಶಿಷ್ಟ ಬರಹಗಾರರಾಗಿದ್ದಾರೆ. ಸಿಂಗಾಪುರ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಿಂದ ಪದವಿ ಪಡೆದಿರುವ ನಿರ್ಮಲಾ ಅವರ ಅಳಿಯ ಪ್ರತೀಕ್ ದೋಷಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿದ್ದಾರೆ.