Connect with us

LATEST NEWS

ಗೋಹತ್ಯೆ ನಿಷೇಧ ಕಾನೂನು ವಾಪಸ್ ಪಡೆದರೆ ಕೋಮು ಸಂಘರ್ಷ ಭೀತಿ: ಶಾಸಕ ಕಾಮತ್

Share Information

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದಿರುವ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ’ ಯನ್ನು ಕಾಂಗ್ರೆಸ್ ಸರಕಾರ ವಾಪಸ್ ಪಡೆಯುವ ಸಿದ್ಧತೆಯಲ್ಲಿದ್ದು, ಇದರಿಂದ ಶಾಂತಿಯುತವಾಗಿದ್ದ ರಾಜ್ಯದಲ್ಲಿ ಮತ್ತೆ ಕೋಮು ಸಂಘರ್ಷ ವಾತಾವರಣ ಸೃಷ್ಟಿಯಾಗುವ ಭೀತಿ ಇದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಂಸ್ಕೃತಿಯಲ್ಲಿ ಗೋವುಗಳಿಗೆ ಪೂಜ್ಯ ಸ್ಥಾನ ಇದೆ. ಗೋ ತಳಿಗಳನ್ನು ಸಂರಕ್ಷಿಸುವ ಮತ್ತು ಭಾವನಾತ್ಮಕ ವಿಚಾರಗಳ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ಈ ಕಾನೂನು ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಗೋ ಕಳ್ಳತನ, ಅಕ್ರಮ ಖಸಾಯಿಕಾನೆಗಳಿಗೆ ಕಡಿವಾಣ ಬಿದ್ದಿತ್ತು. ಇದರಿಂದ ಕೋಮು ಸಂಘರ್ಷವೂ ಕಡಿಮೆಯಾಗಿತ್ತು. ಇದೀಗ ರಾಜ್ಯ ಸರಕಾರ ಈ ಕಾನೂನನ್ನು ವಾಪಸ್ ಪಡೆದರೆ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಮನೆಗೆ ನುಗ್ಗಿ ಗೋ ಕಳವು ಮಾಡುವ ಪ್ರಕರಣ ಹೆಚ್ಚಾಗಲಿದೆ. ರೈತಾಪಿ ವರ್ಗದವರಿಗೆ ಇದರಿಂದಾಗಿ ತುಂಬಲಾರದ ನಷ್ಟ ಉಂಟಾಗಲಿದೆ. ವೋಟ್ ಬ್ಯಾಂಕ್ ಸೃಷ್ಟಿಸುವ ಕಾಂಗ್ರೆಸ್ ನ ಈ ಮನಸ್ಥಿತಿಯಿಂದಾಗಿ ಶಾಂತಿಯುತವಾಗಿದ್ದ ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಅಶಾಂತಿಯ ವಾತಾವರಣ ಸೃಷ್ಟಿಯಾಗಲಿದೆ. ಯಾವುದೇ ಕಾರಣಕ್ಕೂ ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಪಠ್ಯ ಬದಲಾವಣೆಗೆ ಹೇಳಿಕೆಗಳು ಬರುತ್ತಿವೆ. ನಮ್ಮ ಅವಧಿಯಲ್ಲಿ ರಾಷ್ಟ್ರೀಯ ವಿಚಾರಧಾರೆಗೆ ಒತ್ತು ಕೊಟ್ಟು ಪಠ್ಯ ಪರಿಷ್ಕರಣೆ ಮಾಡಲಾಗಿತ್ತು. ರಾಷ್ಟ್ರೀಯತೆಯನ್ನು ಕಾಂಗ್ರೆಸ್ ನವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣದಿಂದ ಪಠ್ಯ ಬದಲಾವಣೆಗೆ ಮುಂದಾಗಿದ್ದಾರೆ. ಯಾವ ಕಾರಣದಿಂದ ಪಠ್ಯ ಬದಲಾವಣೆ ಮಾಡಲಾಗುತ್ತದೆ ಮತ್ತು ಯಾವ ರೀತಿಯಲ್ಲಿ ಪಠ್ಯ ಪರಿಷ್ಕರಿಸಲಾಗುತ್ತದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. ದೇಶ ವಿರೋಧಿ ಮನಸ್ಥಿತಿ ಹೊಂದಿರುವ ವ್ಯಕ್ತಿಗಳ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿರುವ ಪಠ್ಯವನ್ನು ಅಳವಡಿಸಿದರೆ ಇದಕ್ಕೆ ನಮ್ಮ ಸ್ಪಷ್ಟ ವಿರೋಧ ಇದೆ ಎಂದು ಕಾಮತ್ ಎಚ್ಚರಿಸಿದರು.

ಬಜರಂಗದಳ ನಿಷೇಧ ಮಾಡುವ ಬಗ್ಗೆ ಸಚಿವರು, ಕಾಂಗ್ರೆಸ್ ಮುಖಂಡರಿಂದ ಪದೇ ಪದೇ ಹೇಳಿಕೆಗಳು ಬರುತ್ತಿವೆ. ಸೇವಾ ನಿರತ ಸಂಘಟನೆಯನ್ನು ಪಿಎಫ್ ಐಗೆ ಹೋಲಿಕೆ ಮಾಡಿ ಅದನ್ನು ನಿಷೇಧ ಮಾಡುತ್ತೇವೆ ಎಂದು ಹೇಳುತ್ತಿರುವುದು ತೀರಾ ಬಾಲಿಷವಾದುದು. ಇಂತಹಾ ಕೆಲಸಕ್ಕೆ ಕೈ ಹಾಕಿದರೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply