DAKSHINA KANNADA
ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಪ್ರಕರಣ-ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ
ಮಂಗಳೂರು ಅಗಸ್ಟ್ 19: ಕಾವ್ಯಾ ಸಾವಿನ ಪ್ರಕರಣದಲ್ಲಿ ತನಿಖಾ ಅಧಿಕಾರಿಗಳ ವಿಳಂಬ ನೀತಿ ಖಂಡಿಸಿ ಹಾಗೂ ಕಾವ್ಯಾ ಸಾವಿನ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಎಚ್ಚರಿಸಿದೆ .ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಾಶ್ವತ್ ಕೊಟ್ಟಾರಿ, ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.ಕಾವ್ಯಾಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಲವಾರು ಬಾರಿ ಪ್ರತಿಭಟನೆ ಹೋರಾಟ ನಡೆಸಲಾಗಿದೆ, ಆದರೆ ಕಾವ್ಯಾಳ ಸಾವಿನ ಪ್ರಕರಣದ ಸಂಶಯಗಳಿಗೆ ಈವರೆಗೆ ಉತ್ತರ ದೊರಕಿಲ್ಲ. ತನಿಖೆ ನಡೆಸುತ್ತಿರುವ ಪೊಲೀಸರು ಕಾವ್ಯಾಳ ಪೋಷಕರಾಗಲಿ ಅಥವಾ ಸಾರ್ವಜನಿಕರಾಗಲಿ ಈವರೆಗೆ ಮಾಹಿತಿ ನೀಡದಿರುವುದು ಅಚ್ಚರಿ ತಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು .ಕಾವ್ಯಾಳ ಕುಟುಂಬಕ್ಕೆ ಪರಿಹಾರ ನೀಡುವ ಬೇಡಿಕೆ ಇಟ್ಟಿದ್ದರೂ ರಾಜ್ಯ ಸರ್ಕಾರ ಅದಕ್ಕೆ ಈವರೆಗೆ ಸ್ಪಂದಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು .
ಈ ಹಿನ್ನೆಲೆಯಲ್ಲಿ ಕಾವ್ಯ ಸಾವಿನ ಪ್ರಕರಣಕ್ಕೆ ತನಿಖಾಧಿಕಾರಿಗಳ ವಿಳಂಬ ನೀತಿ ಹಾಗೂ ಕಾವ್ಯಾ ಸಾವಿನ ನ್ಯಾಯಕ್ಕಾಗಿ ಒತ್ತಾಯಿಸಿ ಇದೇ ಬರುವ ಆಗಸ್ಟ್ 26 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ತಿಳಿಸಿದರು.
You must be logged in to post a comment Login