Connect with us

    FILM

    ಹೃದಯಾಘಾತದಿಂದ ಕಿರಾತಕ ಖ್ಯಾತಿಯ ಖಳನಟ ಡ್ಯಾನಿಯಲ್​ ಬಾಲಾಜಿ ಇನ್ನಿಲ್ಲ

    ಚೆನ್ನೈ, ಮಾರ್ಚ್ 30: ಸೌತ್​ ಸಿನಿ ಇಂಡಸ್ಟ್ರಿಯ ಖ್ಯಾತ ಖಳ ನಟ ಡ್ಯಾನಿಯಲ್ ಬಾಲಾಜಿ ​ ಹೃದಯಾಘಾತದಿಂದ ಶನಿವಾರ (ಮಾರ್ಚ್​ 30) ನಿಧನರಾಗಿದ್ದಾರೆ. ಮೃತರಿಗೆ 48 ವರ್ಷ ವಯಸ್ಸಾಗಿತ್ತು.

    ಮಾರ್ಚ್​ 29ರಂದು ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ ಕಾರಣ ಶನಿವಾರ (ಮಾರ್ಚ್​ 30) ಅವರು ಕೊನೆಯುಸಿರು ಎಳೆದಿದ್ದಾರೆ. ಚೆನ್ನೈನ ಪುರಸೈವಾಲ್ಕಂನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ನಟ ಡ್ಯಾನಿಯಲ್​ ಬಾಲಾಜಿ ಕನ್ನಡ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬ ಸದಸ್ಯರಾಗಿದ್ದು, ಚಿತ್ರಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಾಕಿಂಗ್​ ಸ್ಟಾರ್​ ಯಶ್ ನಟನೆಯ ಕಿರಾತಕ​ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಡ್ಯಾನಿಯಲ್​ ಬಾಲಾಜಿ ಕನ್ನಡದಲ್ಲಿ ಕಿರಾತಕ, ಶಿವಾಜಿನಗರ, ಬೆಂಗಳೂರು ಅಂಡರ್​ವರ್ಲ್ಡ್​​​ ಹಾಗೂ ಡವ್​ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ಪ್ರಿಯರಿಗೂ ಕೂಡ ಚಿರಪರಿಚಿತರಾಗಿದ್ದರು.

    ತಮಿಳು ಸೀರಿಯಲ್ ಚಿತ್ತಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಡ್ಯಾನಿಯಲ್​ ಬಾಲಾಜಿ ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಮೂಲಕ ಮೆಚ್ಚುಗೆ ಪಡೆದರು. ಸಿನಿಮಾ ರಂಗ ಹೊರತು ಪಡಿಸಿ ಧಾರ್ಮಿಕ ಕಾರ್ಯಗಳಲ್ಲೂ ಡ್ಯಾನಿಯಲ್​ ಬಾಲಾಜಿ ಸಕ್ರಿಯರಾಗಿದ್ದು, ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ನಟನ ಅಗಲಿಕೆಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply