Connect with us

    KARNATAKA

    ಎಮ್ಮೆಕೆರೆ ಸ್ವಿಮ್ಮಿಂಗ್ ಪೂಲ್: ಕ್ರೀಡಾಪಟು,ಸ್ಥಳೀಯರ ಅನ್ಯಾಯ ಸರಿಪಡಿಸದಿದ್ರೆ ಹೋರಾಟ-ಶಾಸಕ ಕಾಮತ್

    ಮಂಗಳೂರು : ಮಂಗಳೂರಿನ ಎಮ್ಮೆಕೆರೆಯ ಅಂತರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಪೂಲ್ ಉದ್ಘಾಟನೆಗೆ ತರಾತುರಿಯಲ್ಲಿ ತಯಾರಿ ನಡೆಸಿ ಇಲ್ಲಿನ ಕ್ರಿಕೆಟ್ ಮೈದಾನದ ಅಭಿವೃದ್ಧಿಯನ್ನೇ ನಿರ್ಲಕ್ಷಿಸಿದರ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದು ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಹಿಂದಿನ ಶಾಸಕರ ಅವಧಿಯಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ಕ್ರಿಕೆಟ್ ಮೈದಾನದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣವಾಗುವುದಕ್ಕೆ ಸಾರ್ವಜನಿಕರು, ಕ್ರೀಡಾಭಿಮಾನಿಗಳು ಸೇರಿದಂತೆ ಎಲ್ಲಾ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ನಾನು ಶಾಸಕನಾದ ಮೇಲೆ ಈ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಅಂದಿನ ಮಹಾನಗರ ಪಾಲಿಕೆಯ ಸದಸ್ಯರಾದ ದಿವಾಕರ ಪಾಂಡೇಶ್ವರ ಹಾಗೂ ಪ್ರೇಮಾನಂದ ಶೆಟ್ಟಿಯವರ ಜೊತೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳನ್ನು, ದೇವಸ್ಥಾನಗಳನ್ನು ಕ್ರೀಡಾಭಿಮಾನಿಗಳನ್ನು, ಇಲ್ಲಿ ವಾಕಿಂಗ್ ಮಾಡಲು ಬರುವ ಸಾರ್ವಜನಿಕರನ್ನು, ಸೇರಿದಂತೆ ಎಲ್ಲಾ ಸ್ಥಳೀಯರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಅಡೆತಡೆಗಳನ್ನು ನಿವಾರಿಸಿ 1 ಎಕ್ರೆ 57 ಸೆಂಟ್ಸ್ ಜಾಗವನ್ನು ಆಟದ ಮೈದಾನಕ್ಕೆ ಕಾಯ್ದಿರಿಸಿ, 2 ಎಕ್ರೆ ಜಾಗವನ್ನು ಮಾತ್ರ ಸ್ವಿಮ್ಮಿಂಗ್ ಪೂಲ್ ಗೆ ಉಪಯೋಗಿಸಲು ತೀರ್ಮಾನಿಸಿ, ಸ್ಥಳೀಯರ ಒಮ್ಮತದ ಒಪ್ಪಿಗೆಯೊಂದಿಗೆ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.ಸ್ವಿಮ್ಮಿಂಗ್ ಪೂಲ್ ನಿರ್ಮಾಣದ ಜೊತೆಯಲ್ಲಿಯೇ ಸ್ಥಳೀಯರಿಗೆ, ಕ್ರೀಡಾಪಟುಗಳಿಗೆ, ಸಾರ್ವಜನಿಕರಿಗೆ, ಅಗತ್ಯವಾಗಿರುವ ಈ ಮೈದಾನದಲ್ಲಿ ಕ್ರಿಕೆಟ್ ಗೆ ಪೂರಕವಾದ ಪೆವಿಲಿಯನ್, ವೀಕ್ಷಕ ಗ್ಯಾಲರಿ, ಮೈದಾನದ ಹೊರ ಭಾಗದಲ್ಲಿ ವಾಕಿಂಗ್ ಟ್ರ್ಯಾಕ್, ಮತ್ತು ಎಲ್ಲರಿಗೂ ಉಪಯೋಗವಾಗುವಂತೆ ಹೊನಲು ಬೆಳಕಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಂದೇ ಎರಡು ಕೋಟಿ ರೂಪಾಯಿಗಳನ್ನು ಮೀಸಲಿರಿಸಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸೇರಿದಂತೆ ಅಂದಿನ ಎಲ್ಲಾ ಜನಪ್ರತಿನಿಧಿಗಳು, ಹಾಗೂ ಸ್ಥಳೀಯರು ಸೇರಿಕೊಂಡು ಕಾಮಗಾರಿಗೆ ಶಿಲನ್ಯಾಸವನ್ನು ಮಾಡಲಾಗಿತ್ತು ಎಂದರು. ಪ್ರಸ್ತುತ ಸ್ವಿಮ್ಮಿಂಗ್ ಪೂಲ್ ಕಾಮಗಾರಿಯು ಬಹುತೇಕ ಪೂರ್ಣಗೊಂಡು ಅಂತಿಮ ಹಂತದ ಕಾಮಗಾರಿ ಬಾಕಿ ಇದ್ದರೂ ತರಾತುರಿಯಲ್ಲಿ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿದೆ. ಇಲ್ಲಿನ ಕ್ರಿಕೆಟ್ ಮೈದಾನಕ್ಕೆ ಅಗತ್ಯವಾಗಿ ಬೇಕಾದ ಪೂರಕ ಕಾಮಗಾರಿಗಳು, ಹೊರಾಂಗಣದಲ್ಲಿ ವಾಕಿಂಗ್ ಟ್ರ್ಯಾಕ್ ಗಾಗಿ ಈಗಾಗಲೇ ಮೀಸಲಾದ ಎರಡು ಕೋಟಿ ಅನುದಾನವನ್ನು ಬಳಸದೇ ಸಂಪೂರ್ಣವಾಗಿ ನಿರ್ಲಕ್ಷಿಸಿ ಕೇವಲ ಸ್ವಿಮ್ಮಿಂಗ್ ಪೂಲ್ ಉದ್ಘಾಟನೆಗೆ ಸಜ್ಜಾಗಿರುವುದು ಸ್ಥಳೀಯರಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಸಿದೆ. ಇದರಿಂದ ಕ್ರೀಡಾಪಟುಗಳಿಗೆ, ಸ್ಥಳೀಯರಿಗೆ ಅನ್ಯಾಯವಾಗುತ್ತಿದ್ದು ಇದನ್ನು ಖಂಡಿಸಿ ಅವರೊಂದಿಗೆ ಸೇರಿಕೊಂಡು ಹೋರಾಟಕ್ಕೆ ಇಳಿಯುವುದು ಶಾಸಕನಾಗಿ ನನ್ನ ಕರ್ತವ್ಯ ಎಂದು ಎಚ್ಚರಿಸಿದರು
    ಈಜುಕೊಳ ನಿರ್ಮಾಣ ಸಂದರ್ಭದಲ್ಲಿಯೇ ಸ್ಥಳೀಯರು ಕ್ರಿಕೆಟ್ ಮೈದಾನದ ಕುರಿತಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಈಜುಕೊಳಕ್ಕೆ ಸಮ್ಮತಿ ಸೂಚಿಸುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಅಂದು ಅವರ ಬೇಡಿಕೆಗಳನ್ನು ಒಪ್ಪಿಕೊಂಡು ಕಾಮಗಾರಿ ಆರಂಭಿಸಿದ ಮೇಲೆ ಬೇಡಿಕೆ ಈಡೇರಿಸುವುದು ಸರ್ಕಾರದ ಜವಾಬ್ದಾರಿ. ಇದನ್ನೇ ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಸಹ ಒತ್ತಿ ಹೇಳಿದ್ದರು ಎಂದು ಸರ್ಕಾರವನ್ನು ಒತ್ತಾಯಿಸಿದರು.
    ಶಂಕುಸ್ಥಾಪನೆ ಆದಲ್ಲಿಯೇ ಮರು ಶಂಕುಸ್ಥಾಪನೆ:
    ಅಂದು ಇಲ್ಲಿನ ಸ್ವಿಮ್ಮಿಂಗ್ ಪೂಲ್ ಶಂಕುಸ್ಥಾಪನೆ ಸಂದರ್ಭದಲ್ಲಿಯೇ ಕ್ರಿಕೆಟ್ ಆಟದ ಮೈದಾನಕ್ಕೂ ಶಂಕುಸ್ಥಾಪನೆಯನ್ನು ನಡೆಸಲಾಗಿತ್ತು ಮಾತ್ರವಲ್ಲದೇ 2 ಕೋಟಿ ಅನುದಾನವನ್ನೂ ಸಹ ನಿಗದಿಪಡಿಸಲಾಗಿತ್ತು. ಆದರೆ ಈಗ ಅಲ್ಲಿಯೇ ಮತ್ತೆ ಹೊಸದಾಗಿ ಮಾನ್ಯ ಮುಖ್ಯಮಂತ್ರಿಯವರಿಂದ ಶಂಕುಸ್ಥಾಪನೆಯನ್ನು ನಡೆಸಲು ತೀರ್ಮಾನಿಸಿರುವ ಕಾಂಗ್ರೆಸ್ಸಿನವರ ನಾಚಿಕೆಗೇಡಿತನಕ್ಕೆ ಏನು ಹೇಳುವುದು? ಇದು ನಾಡಿನ ಗೌರವಾನ್ವಿತ ಮುಖ್ಯಮಂತ್ರಿಯವರಿಗೆ ಮಾಡುವ ಅವಮಾನವಲ್ಲವೇ?
    ಒಟ್ಟಾರೆಯಾಗಿ ಇವತ್ತು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಲನ್ಯಾಸಗೊಂಡ ಕಾಮಗಾರಿಗಳೇ ಈಗ ಉದ್ಘಾಟನೆಗೆ ಸಿದ್ಧವಾಗಿ ನಿಂತಿವೆ. ಹಾಗಾಗಿ ಇವೆಲ್ಲ ತಮ್ಮದೇ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಎಂದು ಜನರನ್ನು ನಂಬಿಸುವ ಸಲುವಾಗಿ ಮುಖ್ಯಮಂತ್ರಿಗಳಿಂದ ಶಂಕು ಸ್ಥಾಪನೆ ಮೇಲೆಯೇ ಶಂಕುಸ್ಥಾಪನೆ ನಡೆಸಲು ಪ್ರಯತ್ನಿಸಿ ಜಿಲ್ಲೆಯ ಕಾಂಗ್ರೆಸ್ ನಾಯಕರು ನಗೆಪಾಟಲಿಗೀಡಾಗುತ್ತಿದ್ದಾರೆ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply