Connect with us

    DAKSHINA KANNADA

    ಕರ್ನಾಟಕ ಕರಾವಳಿಯ ಈ ಪ್ರಸಿದ್ಧ ಪುಣ್ಯಕ್ಷೇತ್ರ ಸುತ್ತ ಆನೆ ಬರುವಂತಿಲ್ಲ..!!

    ಮಂಗಳೂರು : ಹತ್ತೂರಿನೊಡೆಯ ಕರಾವಳಿಯ ಪುಣ್ಯ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಹಲವು ವಿಶೇಷತೆಗಳ ಕ್ಷೇತ್ರವಾಗಿದೆ.

    ಕ್ಷೇತ್ರದ ಆರಾಧ್ಯದೇವ ಮಹಾಲಿಂಗೇಶ್ವರ ಪುತ್ತೂರಿಗರನ್ನು ಎಲ್ಲಾ ತೊಂದರೆಗಳಿಂದಲೂ ರಕ್ಷಿಸಿದರೆ, ಈ ದೇವರನ್ನು ನಂಬಿ ಬಂದ ಪರವೂರವರನ್ನು ಯಾವತ್ತೂ ಮಹಾಲಿಂಗೇಶ್ವರ ಕೈ ಬಿಟ್ಟಿಲ್ಲ. ಈ ದೇವಸ್ಥಾನಕ್ಕೆ 1200 ವರ್ಷಗಳ ಇತಿಹಾಸವಿರುವ ಶಾಸನಗಳು ಪತ್ತೆಯಾಗಿದ್ದರೂ, ಈ ಕ್ಷೇತ್ರಕ್ಕೆ ಇದಕ್ಕಿಂತಲೂ ಪುರಾತನ ಇತಿಹಾಸವಿದೆ ಎನ್ನುವುದಕ್ಕೆ ಪ್ರಚಲಿತದಲ್ಲಿರುವ ಹಲವು ಕಥೆಗಳೂ ಇವೆ. ಎಲ್ಲಾ ಹಿಂದೂ ಕ್ಷೇತ್ರಗಳಲ್ಲಿ ಆನೆಗಳು ಇರೋದು ಸಾಮಾನ್ಯವಾದರೆ,ಈ ದೇವಸ್ಥಾನದ ಸುತ್ತ ಆನೆಗಳು ಬರುವಂತೆಯೂ ಇಲ್ಲ ಅಂದ್ರೆ ನೀವು ನಂಬ್ತೀರಾ..।

    ಹಿಂದೆ ಕಾಶಿಯಿಂದ ಬಂದಂತಹ ವಿಪ್ರರೊಬ್ಬರು ತನ್ನೊಂದಿಗೆ ತಂದಿದ್ದಂತಹ ಶಿವಲಿಂಗವನ್ನು ಇದೇ ಸ್ಥಳದಲ್ಲಿ ಇರಿಸಿದ್ದರಂತೆ. ಬಳಿಕ ಶಿವಲಿಂಗವನ್ನು ಮತ್ತೆ ಎತ್ತಿ ತನ್ನೊಂದಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ ವಿಪ್ರನಿಗೆ ಲಿಂಗವನ್ನು ಅಲ್ಲಿಂದ ಎಷ್ಟೇ ಸಾಹಸಪಟ್ಟವೂ ಎತ್ತಲು ಸಾಧ್ಯವಾಗಲಿಲ್ಲವಂತೆ. ಬಳಿಕ ವಿಪ್ರ ಈ ಸ್ಥಳಕ್ಕೆ ಸಂಬಂಧಪಟ್ಟ ರಾಜನಲ್ಲಿಗೆ ತೆರಳಿ ತನ್ನ ಅಸಹಾಯಕತೆಯನ್ನು ತೋಡುತ್ತಾನೆ. ಆ ಸಂದರ್ಭದಲ್ಲಿ ಪುತ್ತೂರು ಸೀಮೆಯನ್ನು ಬಂಗರಸರು ಆಳ್ವಿಕೆ ನಡೆಸುತ್ತಿದ್ದ, ವಿಪ್ರನ ಸಹಾಯಕ್ಕೆ ಬಂದ ರಾಜ ತನ್ನ ಪಟ್ಟದ ಆನೆಯನ್ನು ಕಳುಹಿಸಿ ಶಿವಲಿಂಗವನ್ನು ಎತ್ತಲು ತನ್ನ ಆಳುಗಳಿಗೆ ಸೂಚಿಸುತ್ತಾನೆ. ಅದೇ ಪ್ರಕಾರ ಆನೆಯೊಂದಿಗೆ ಬಂದಂತಹ ರಾಜನ ಆಳುಗಳು ಶಿವಲಿಂಗಕ್ಕೆ ಸರಪಳಿಯನ್ನು ಬಿಗಿದು ಆನೆಯ ಮೂಲಕ ಅದನ್ನು ಎಳೆಯುವಂತಹ ಪ್ರಯತ್ನವನ್ನು ನಡೆಸುತ್ತಾರೆ. ಶಿವಲಿಂಗಕ್ಕೆ ಕಟ್ಟಿದಂತಹ ಸರಪಳಿಯನ್ನು ಎಳೆಯುವ ಭರದಲ್ಲಿ ಆನೆಯು ಛಿದ್ರ ಛಿದ್ರವಾಗಿ ಒಂದೊಂದು ಕಡೆಗೆ ಎಸೆಯಲ್ಪಟ್ಟರೆ, ಶಿವಲಿಂಗ ಮಾತ್ರ ಆ ಸ್ಥಳದಿಂದ ಸ್ಪಲ್ಪವೂ ಮೇಲೇಳಲೇ ಇಲ್ಲ. ಈ ಆಶ್ಚರ್ಯವನ್ನು ಅರಿತ ರಾಜ ಶಿವಲಿಂಗವಿರುವ ಸ್ಥಳದಲ್ಲಿಯೇ ಈಗಿರುವಂತಹ ದೇವಸ್ಥಾನವನ್ನು ಕಟ್ಟಿಸಿ ಪೂಜಿಸಲು ಆರಂಭಿಸಿದ ಎನ್ನುವುದು ದೇವಸ್ಥಾನದ ಇತಿಹಾಸದಿಂದ ತಿಳಿದುಬರುವ ಸಂಗತಿಯಾಗಿದೆ.

    ಆನೆಯು ಶಿವಲಿಂಗವನ್ನು ಎತ್ತಿ ಛಿದ್ರ ಛಿದ್ರವಾಗಿ ಎಸೆಯಲ್ಪಟ್ಟ ಸ್ಥಳಗಳೂ ಇಂದಿಗೂ ಈ ದೇವಸ್ಥಾನದ ಅಸುಪಾಸಿನಲ್ಲಿದ್ದು, ಆನೆಯ ಕೊಂಬು ಬಿದ್ದ ಸ್ಥಳವು ಇದೀಗ ಕೊಂಬೆಟ್ಟು , ಬಾಲ ಬಿದ್ದ ಸ್ಥಳ ಬಲ್ನಾಡು, ತಲೆ ಬಿದ್ದ ಸ್ಥಳ ತಾಳಿಪ್ಪಾಡಿ, ಕಾಲು ಬಿದ್ದ ಸ್ಥಳ ಕಾರ್ಜಾಲು, ಮೊಣಗಂಟು ಬಿದ್ದ ಸ್ಥಳ ಮೊಟ್ಟೆತ್ತಡ್ಕ ಹೀಗೆ ಹಲವು ಹೆಸರುಗಳು ಆನೆಯ ದೇಹದ ವಿವಿಧ ಭಾಗಗಳಿಗೆ ಸಂಬಂಧಪಟ್ಟಂತಹುದೇ ಆಗಿದೆ. ಅಲ್ಲದೆ ಅಂದಿನಿಂದ ಈ ದೇವಸ್ಥಾನದ ಆಸುಪಾಸಿಗೆ ಆನೆಗಳು ಬರಬಾರದೆಂಬ ಸಂಪ್ರದಾಯವು ಪ್ರಸ್ತುತ ಇಂದಿಗೂ ಚಾಲ್ತಿಯಲ್ಲಿದ್ದು, ದೇವಸ್ಥಾನದ ಗದ್ದೆಯಲ್ಲಿ ಹಲವು ಸರ್ಕಸ್ ಕಂಪನಿಗಳು ಬಂದು ತಮ್ಮ ಪ್ರದರ್ಶನವನ್ನು ನೀಡುವ ಸಂದರ್ಭದಲ್ಲಿ ಆನೆಯನ್ನು ಮಾತ್ರ ಪ್ರದರ್ಶನದಿಂದ ದೂರವೇ ಇರಿಸುವಂತಹ ವ್ಯವಸ್ಥೆ ಇಂದಿಗೂ ನಡೆದುಕೊಂಡು ಬಂದಿದೆ. ಇಲ್ಲಿ ನೆಲೆ ನಿಂತಂತಹ ಶಿವಲಿಂಗಕ್ಕೆ ದೇವಸ್ಥಾನವನ್ನು ಕಟ್ಟಿ ಪೂಜಿಸಿಕೊಂಡು ಬಂದಂತಹ ರಾಜರಿಗೆ ಮರ್ಯಾದೆಯನ್ನು ನೀಡುವ ಕಾರ್ಯವೂ ದೇವಸ್ಥಾನದಲ್ಲಿ ನಡೆಯುವ ವಿಶೇಷ ಸೇವಾ ಸಂದರ್ಬದಲ್ಲಿ ನಡೆದುಕೊಂಡು ಬರುತ್ತಿದ್ದು, ಜೀಟಿಗೆ ಸಲಾಂ ಎನ್ನುವ ಮರ್ಯಾದೆಯ ಮೂಲಕ ರಾಜರನ್ನು ನೆನೆಯುವ ಕಾರ್ಯವೂ ಇಲ್ಲಿ ನಡೆಯುತ್ತದೆ.

    ಮಹಾಲಿಂಗೇಶ್ವರನಿಗೂ ಹಾಗೂ ಕ್ಷೇತ್ರದ ಹತ್ತಿರದಲ್ಲೇ ಇರುವಂತಹ ಉಳ್ತಾಲ್ತಿ ದೈವಕ್ಕೂ ಅವಿನಾಭಾವ ನಂಟು ಇದೆ. ಪ್ರತಿ ದಿನವೂ ದೇವರು ದೇವಸ್ಥಾನದ ಆವರಣದಲ್ಲಿ ಸುತ್ತು ಬರುವ ಮೊದಲು ದೇವಸ್ಥಾನದ ಆವರಣದಲ್ಲೇ ಇರುವಂತಹ ಉಳ್ತಾಲ್ತಿ ದೈವದ ಗುಡಿಯಲ್ಲಿ ಸವಾರಿಗೆ ಅನುಮತಿ ಕೇಳುವಂತಹ ಸಂಪ್ರದಾಯವೂ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಲ್ಲದೆ ಉಳ್ತಾಲ್ತಿ ದೈವದ ನೇಮೋತ್ಸವಕ್ಕೆ ಮಹಾಲಿಂಗೇಶ್ವರನನ್ನು ದೈವಗಳು ಭಂಡಾರದೊಂದಿಗೆ ಬಂದು ಆಹ್ವಾನಿಸುವಂತಹ ಸಂಪ್ರಾಯವೂ ಪ್ರತಿವರ್ಷ ಇಲ್ಲಿ ನಡೆಯುತ್ತದೆ.
    ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧ ಹಾಗೂ ಅತ್ಯಂತ ಕಾರಣಿಕದ ದೇವಸ್ಥಾನವಾಗಿದ್ದು, ಯಾವುದೇ ಜಾತಿ ಮತ ಭೇಧವಿಲ್ಲದೆ ಎಲ್ಲರೂ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇಲ್ಲಿನ ವಿಶೇಷತೆಯಾಗಿದೆ. ವಾರ್ಷಿಕ ಜಾತ್ರೋತ್ಸವದ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವ ಕ್ಷೇತ್ರ ಮಹಾಲಿಂಗೇಶ್ವರ ದೇವಸ್ಥಾನವಾಗಿದ್ದು, ಈ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಸಾವಿರಾರು ಜನರಿಗೆ ವ್ಯಾಪಾರದ ಮೂಲಕ ಬದುಕನ್ನೂ ಕಟ್ಟಿಕೊಡುವ ಆರಾಧ್ಯದೇವ ಮಹಾಲಿಂಗೇಶ್ವರನಾಗಿದ್ದಾನೆ.

     

    Share Information
    Advertisement
    Click to comment

    You must be logged in to post a comment Login

    Leave a Reply