Connect with us

    DAKSHINA KANNADA

    ಪಿಎಫ್ಐ ಮೇಲೆ ಎನ್.ಐ.ಎ ದಾಳಿ ಹಿಂದಿನ ಮರ್ಮವೇನು ಗೊತ್ತೇ?

    ಮಂಗಳೂರು, ಸೆಪ್ಟೆಂಬರ್ 23: ರಾಷ್ಟ್ರೀಯ ತನಿಖಾ ದಳ ದಾಖಲಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಎನ್ಐಎ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದೆ.

    ಮುಂಜಾನೆ 3 ಗಂಟೆ ಸುಮಾರಿಗೆ ದಾಳಿ ಕಾರ್ಯಾಚರಣೆಯನ್ನು ಆರಂಭಿಸಿದ ಎನ್.ಐ.ಎ ಮತ್ತು ಸ್ಥಳೀಯ ಪೋಲೀಸರ ತಂಡ ಮಂಗಳೂರು, ಉಪ್ಪಿನಂಗಡಿ, ಕಲ್ಲಡ್ಕ,ಪುತ್ತೂರು ಮೊದಲಾದ ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಹಲವು ದಾಖಲೆಗಳನ್ನೂ ಸಂಗ್ರಹಿಸಿದೆ. ಕಲ್ಲಡ್ಕ ಸಮೀಪದ ಬೋಳಂತೂರು ಎಂಬಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮಾಜಿ ರಾಜ್ಯಾಧ್ಯಕ್ಷ ಮಹಮ್ಮದ್ ತಬ್ಸೀರ್ ಮನೆಗೆ ದಾಳಿ ನಡೆಸಿದ ತಂಡ ಮನೆ ಮಂದಿಯೊಂದಿಗೆ ಹಾಗು ತಬ್ಸೀರ್ ನಿಂದ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

    ಎನ್.ಐ.ಎ ದಾಳಿ ನಡೆಸುವ ಮಾಹಿತಿಯನ್ನು ಪಡೆದು ತಬ್ಸೀರ್ ಮನೆ ಮುಂದೆ ನೂರಾರು ಎಸ್‌.ಡಿ.ಪಿ.ಐ ಮತ್ತು ಪಿಎಫ್ಐ ಕಾರ್ಯಕರ್ತರು ಜಮಾವಣೆಗೊಂಡು ಗೋ ಬ್ಯಾಕ್ ಎನ್.ಐ.ಎ ಘೋಷಣೆಯನ್ನು ಕೂಗಿದ್ದಾರೆ. ಸ್ಥಳದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮನೆ ಮುಂದೆ ಜಮಾವಣೆಗೊಂಡಿದ್ದ ಕಾರ್ಯಕರ್ತರನ್ನು ಪೋಲೀಸರು ಚದುರಿಸಿದ ಘಟನೆಯೂ ನಡೆಸಿದೆ.

    ಉಪ್ಪಿನಂಗಡಿಯ ಲಕ್ಷೀನಗರದ ನಿವಾಸಿ ಎಸ್.ಡಿ.ಪಿ.ಐ ರಾಜ್ಯ‌ ಕಾರ್ಯಕಾರಿಣಿ ಸಮಿತಿ ಸದಸ್ಯ ಅಯೂಬ್ ಅಗ್ನಾಡಿ ಮನೆಗೆ ದಾಳಿ ನಡೆಸಿದ ತಂಡಕ್ಕೂ ಪಿಎಫ್ಐ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತರು ತಡೆಯೊಡ್ಡಲು ಮುಂದಾಗಿದ್ದರು. ಈ ಸಮಯದಲ್ಲೂ ಪೋಲೀಸರು ಕಾರ್ಯಕರ್ತರನ್ನು ಬಲವಂತವಾಗಿ ಕಳುಹಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಾರೆ.

    ಪುತ್ತೂರಿನ ಸಾಮೆತ್ತಡ್ಕ ನಿವಾಸಿ, ಎಸ್.ಡಿ.ಪಿ.ಐ‌ ರಾಜ್ಯ‌ ಕಾರ್ಯದರ್ಶಿ ಅಬ್ದುಲ್ ಖಾದರ್ ಮನೆಗೂ ದಾಳಿ ನಡೆಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೋಲೀಸರು ಅವರನ್ನು ಪುತ್ತೂರು ನಗರ ಪೋಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಎನ್.ಐ.ಎ ದಾಳಿ ಹಿಂದಿನ ಪ್ರಮುಖ ಕಾರಣವೇನು ಎನ್ನುವುದು ನಿಗೂಢವಾಗಿದ್ದು, ಬೆಂಗಳೂರಿನಲ್ಲಿ ನಡೆದ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ತನಿಖೆಯ ಬಗ್ಗೆಯೂ ಈ ದಾಳಿ ನಡೆದಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ‌.

    ಆದರೆ ಈ ದಾಳಿಯ ಹಿಂದೆ ಎಸ್‌.ಡಿ.ಪಿ.ಐ ಮತ್ತು ಪಿಎಫ್ಐ ಮುಖಂಡರ ಎಲ್ಲಾ ದಾಖಲೆಗಳನ್ನು ಸಂಗ್ರಹಿಸುವ ಉದ್ಧೇಶವೂ ಇದೆ ಎನ್ನಲಾಗಿದೆ. ಎಸ್‌.ಡಿ.ಪಿ.ಐ ಮತ್ತು ಪಿಎಫ್ಐ ಸಂಘಟನೆಯ ಕಾರ್ಯಕರ್ತರಿಗೆ ಸರಿಯಾದ ಗುರುತಿನ ಚೀಟಿ ನೀಡುವ ವ್ಯವಸ್ಥೆಯನ್ನು ಈ ಸಂಘಟನೆಗಳು ಮಾಡಿಲ್ಲ. ಈ ಕಾರಣಕ್ಕಾಗಿಯೇ ದೇಶದೆಲ್ಲೆಡೆ ನಡೆಯುವ ಅಹಿತಕರ ಘಟನೆಗಳ ಹಿಂದೆ ಪಿಎಫ್ಐ ಸಂಘಟನೆಯಿದ್ದರೂ, ಘಟನೆಗಳು ನಡೆಯಲು ನೇತೃತ್ವ ವಹಿಸಿಕೊಂಡವರು ಯಾರು ಎನ್ನುವ ನಿಖರ ಮಾಹಿತಿ ತನಿಖಾ ಸಂಸ್ಥೆಗಳಲ್ಲೂ ಇಲ್ಲದಾಗಿದೆ.

    ದಾಳಿಯ ಮೂಲಕ ಪಿಎಫ್ಐ ಮತ್ತು ಎಸ್‌.ಡಿ.ಪಿ.ಐ ಮುಖಂಡರ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತನಿಖಾ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಈ ಕಾರ್ಯಾಚರಣೆಗಳು ನಡೆಯುತ್ತಿವೆ. ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಕೂಡಾ ಇದೇ ವಿಚಾರವನ್ನು ಅಂದು ಮಾಧ್ಯಮಗಳಿಗೆ ತಿಳಿಸಿದ್ದರು.

    ಪ್ರವೀಣ್ ಹಂತಕರು ಯಾವು ಸಂಘಟನೆಗೆ ಸೇರಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿಯೂ ದೊರೆಯದಿರಲು, ಸಂಘಟನೆಯಿಂದ ಗುರುತಿನ ಪತ್ರ ನೀಡದೇ ಇರುವುದೂ ಕಾರಣವಾಗಿತ್ತು. ಇನ್ನೊಂದು ಮೂಲಗಳ ಪ್ರಕಾರ ಪಿಎಫ್ಐ ಮತ್ತು ಎಸ್.ಡಿ.ಪಿ.ಐ ಮುಖಂಡರ ಮತ್ತು ಕಾರ್ಯಕರ್ತರ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವ ಹಿಂದೆ ಈ ಸಂಘಟನೆಗಳನ್ನು ನಿಷೇಧ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ ಎನ್ನಲಾಗಿದೆ.

    ದೇಶದಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಸಿಮಿ ಸಂಘಟನೆಗೆ ಸೇರಿದ್ದ ಮುಖಂಡರೇ ಕ್ರಮೇಣ ಕೆ.ಎಫ್.ಡಿ ಸಂಘಟನೆಯನ್ನು ರಚಿಸಿದ್ದು, ಸರಕಾರ ಕೆ.ಎಫ್.ಡಿ ಯನ್ನು ನಿಷೇಧಿಸಿದ ಸಂದರ್ಭದಲ್ಲಿ ಅದೇ ಮುಖಂಡರು ಮತ್ತು ಕಾರ್ಯಕರ್ತರು ಪಿಎಫ್ಐ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಕಾರ್ಯಕರ್ತರ ಮತ್ತು ಮುಖಂಡರ ಸರಿಯಾದ ದಾಖಲೆ ಇಲ್ಲದ ಕಾರಣ ಈ ರೀತಿಯ ಗೊಂದಲಗಳು ನಿರ್ಮಾಣವಾಗುತ್ತಿದ್ದು, ಇದೀಗ ದಾಳಿ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯವೂ ನಡೆಯುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply