MANGALORE
ದಕ್ಷಿಣಕನ್ನಡ ವಿಷನ್ 2025 ಕಾರ್ಯಾಗಾರ

ದಕ್ಷಿಣಕನ್ನಡ ವಿಷನ್ 2025 ಕಾರ್ಯಾಗಾರ
ಮಂಗಳೂರು ಅಕ್ಟೋಬರ್ 3: ಮುಂದಿನ ಏಳು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ‘ವಿಷನ್ 2025’ ಯೋಜನೆ ತಯಾರಿಸಲು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾಗಾರದಲ್ಲಿ ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಗೆ ಒತ್ತು ನೀಡಲಾಗಿದೆ.
ಸಮಾಜದ ವಿವಿಧ ವಲಯದ ಗಣ್ಯರು, ತಜ್ಞರು, ಪರಿಣಿತರು, ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಜನಸಾಮಾನ್ಯರು ಒಳಗೊಂಡಂತೆ ಮುಂದಿನ ಏಳು ವರ್ಷಗಳ ಅಭಿವೃದ್ಧಿ ಮುನ್ನೋಟ ಸಿದ್ಧಪಡಿಸಲು ಇಂದಿನ ಕಾರ್ಯಾಗಾರ ಆಯೋಜಿಸಲಾಗಿತ್ತು.

ಒಟ್ಟು 5 ಪ್ರಮುಖ ಕ್ಷೇತ್ರಗಳನ್ನು ಆಧರಿಸಿ 13 ವಿಷಯಗಳ ಅಭಿವೃದ್ಧಿಗೆ ಮುನ್ನೋಟ ರಚನೆಯಾಗಲಿದೆ. ಈ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಪ್ರಸಕ್ತ ಕಾಲಕ್ಕೆ ತಕ್ಕಂತೆ ಆಗಬೇಕಾದ ಬದಲಾವಣೆ ಮತ್ತಿತರ ಕಾರ್ಯಗಳ ಕುರಿತು ಚರ್ಚೆ, ಸಂವಾದ, ಅಭಿಪ್ರಾಯ ಮಂಡನೆಗಳಾದವು. ಜಿಲ್ಲೆಯ ಸಮಗ್ರ ಬೆಳವಣಿಗೆ ದೃಷ್ಠಿಯಿಂದ ವಿಶೇಷ ಕೃಷಿ ವಲಯ,
ಸಣ್ಣ ಕೈಗಾರಿಕಾ ಪ್ರದೇಶ ವಿಸ್ತರಣೆ ಮತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಪ್ರಮುಖ ಅಂಶಗಳು ಕಾರ್ಯಾಗಾರದಲ್ಲಿ ಮೂಡಿಬಂದವು.
ದಕ್ಷಿಣ ಕನ್ನಡ ವಿಷನ್ 2025 ಕಾರ್ಯಕ್ರಮದ ಚರ್ಚೆಯಲ್ಲಿ ಶಾಸಕರಾದ ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್ ಭಾಗವಹಿಸಿದ್ದರು. ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ರಾಜ್ಯ ಸರಕಾರವು ರಸ್ತೆ ಸೇರಿದಂತೆ ಸರಕಾರವು ಮೂಲಸೌಕರ್ಯ ಅಭಿವೃದ್ಧಿಗೆ ಹಿಂದೆಂದೂ ಇಲ್ಲದಷ್ಟು ಮಹತ್ವ ನೀಡಿದೆ. ಇದರಿಂದ ಕೈಗಾರಿಕೆ ಕೃಷಿ ಕ್ಷೇತ್ರಗಳಲ್ಲಿ ಜಿಲ್ಲೆ ಪ್ರಗತಿ ಹೊಂದುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ, ಇಂದಿನ ಕಾರ್ಯಾಗಾರದಲ್ಲಿ ಮೂಡಿಬಂದ ಎಲ್ಲಾ ವಿಷಯಗಳನ್ನೊಳಗೊಂಡಂತೆ ವಿಷನ್ 2025 ತಯಾರಿಸಿ, 2025ರೊಳಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಯೋಜನೆ ರೂಪಿಸಲಿದೆ ಎಂದು ಹೇಳಿದರು.