LATEST NEWS
224 ಶಾಸಕರನ್ನು ಸೇರಿಸಿಕೊಳ್ಳಲಿ ನಮಗೇನು ಅಭ್ಯಂತರ ಇಲ್ಲ – ಡಿ. ಕೆ ಶಿವಕುಮಾರ್
ಮಂಗಳೂರು ಜುಲೈ 31: ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಡಿ.ಕೆ ಶಿವಕುಮಾರ್ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿಕೆ ಶಿವಕುಮಾರ್ ಅವರನ್ನು ಮಾಜಿ ಸಚಿವರಾದ ಯು.ಟಿ ಖಾದರ್, ರಮಾನಾಥ ರೈ ಸ್ವಾಗತಿಸಿದರು.
ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 15 ಕಾಂಗ್ರೆಸ್ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಈ ವಿಚಾರಕ್ಕೆ ಹಾರೈಸುತ್ತೇನೆ. ಅವರು ಇಡೀ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿ. ಎಲ್ಲಾ 224 ಮಂದಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಾನು ಭಾವಿಸಿದೆ. ಆದರೆ ಅವರು ಕೇವಲ 15 ಶಾಸಕರನ್ನು ಮಾತ್ರ ಯಾಕೆ ಹೇಳುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಬಿಜೆಪಿ ಎಷ್ಟು ಶಾಸಕರನ್ನಾದರೂ ತಮ್ಮ ಬಳಿ ಸೇರಿಸಿಕೊಳ್ಳಲಿ, ನಮ್ಮ ಗುರಿ ಪಕ್ಷ ಸಂಘಟನೆ. ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕರ್ತರೊಂದಿಗೆ ಇದೆ. ದೇಶಾದ್ಯಂತ ನಮ್ಮ ಕಾರ್ಯಕರ್ತರ ಸಹಾಯದಿಂದ ಪಕ್ಷವನ್ನು ನಿರ್ಮಿಸುತ್ತೇವೆ ಎಂದು ತಿರುಗೇಟು ನೀಡಿದರು.
ನಂತರ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅನಾರೋಗ್ಯದಿಂದ ಆಸ್ಕರ್ ಫರ್ನಾಂಡಿಸ್ ಅವರು ಶಿವಕುಮಾರ್ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ.
https://youtu.be/LH7UiMmmn-k