LATEST NEWS
ಜಿಲ್ಲೆಯಲ್ಲಿ ನೀರಿಗೆ ಬರ ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾದ ಉಸ್ತುವಾರಿ ಸಚಿವ ಯು.ಟಿ ಖಾದರ್
ಜಿಲ್ಲೆಯಲ್ಲಿ ನೀರಿಗೆ ಬರ ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ಬ್ಯುಸಿಯಾದ ಉಸ್ತುವಾರಿ ಸಚಿವ ಯು.ಟಿ ಖಾದರ್
ಮಂಗಳೂರು ಮೇ 18: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಉಲ್ಬಣಗೊಂಡಿದ್ದು, ಜಿಲ್ಲೆಯ ಜನ ಎದುರಿಸುತ್ತಿರುವ ನೀರಿನ ಸಮಸ್ಯೆ ಬಗೆಹರಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕಂಡಿರದ ನೀರಿನ ಸಮಸ್ಯೆಯನ್ನು ಈ ಬಾರಿ ಎದುರಿಸುತ್ತಿದ್ದಾರೆ. ರಾಜ್ಯ ಸರಕಾರದ ಎತ್ತಿನಹೊಳೆ ಯೋಜನೆಯಿಂದಾಗಿ ಜಿಲ್ಲೆಯ ಜನರಿಗೆ ತೊಂದರೆಯಾಗುತ್ತದೆ ಎನ್ನುವ ವಿಚಾರದಲ್ಲಿ ಬಿಜೆಪಿ ಪಕ್ಷ, ಸಂಸದರು ಹಾಗೂ ಜಿಲ್ಲೆಯ ಜನ ಹಲವು ರೀತಿಯ ಪ್ರತಿಭಟನೆಗಳನ್ನು ಈ ಹಿಂದೆಯೇ ಮಾಡಿದೆ.
ಆದರೆ ರಾಜ್ಯ ಸರಕಾರ ಇದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಯೋಜನೆಯನ್ನು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಪ್ರಾರಂಭಿಸಿದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಅನ್ಯಾಯವಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ವಿಚಾರವನ್ನಿಟ್ಟು ಜಿಲ್ಲೆಯ ಬಿಜೆಪಿಯ ಏಳು ಜನ ಶಾಸಕರೂ ಹೋರಾಟ ಮಾಡಲಿದ್ದೇವೆ ಎಂದರು. ನಮ್ಮ ಹೋರಾಟದಿಂದ ಸರಕಾರ ಯೋಜನೆಯನ್ನು ರದ್ದುಗೊಳಿಸುತ್ತೋ ಎನ್ನುವುದನ್ನು ಹೇಳಲಾಗದು.
ಆದರೆ ಜಿಲ್ಲೆಯ ಜನರಿಗೆ ತೊಂದರೆಯಾಗಲು ತಾವು ಬಿಡುವುದಿಲ್ಲ ಎಂದ ಅವರು ಜಿಲ್ಲೆಯಲ್ಲಿ ಇಷ್ಟೊಂದು ನೀರಿನ ಬರವಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಚುನಾವಣೆಯ ಹಿಂದೆ ಓಡಾಡುತ್ತಿದ್ದಾರೆ. ಸ್ವತಹ ನಗರಾಭಿವೃದ್ಧಿ ಸಚಿವರಾಗಿರುವ ಇವರು ಕನಿಷ್ಠ ಪಕ್ಷ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳಿಗೆ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆಯನ್ನೂ ನೀಡಿಲ್ಲ.
ನೀರಿನ ವಿಚಾರದಲ್ಲಿ ಸಚಿವರು ಬೇಜಾವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ರಾಜ್ಯ ಸರಕಾರವೂ ಜಿಲ್ಲೆಯ ನೀರಿನ ಸಮಸ್ಯೆಗೆ ಸ್ಪಂದಿಸಿಲ್ಲ ಎಂದರು.