ಕರಾವಳಿಯ ಯುವಕರ ವಾಟ್ಸಪ್ ಸ್ಟೇಟಸ್ ನಲ್ಲಿ ಮಿಂಚುತ್ತಿರುವ ‘ಯಾರೇ ನೀನು ಭುವನ ಮೋಹಿನಿ’

ಉಡುಪಿ ಮೇ 19: ಉಡುಪಿಯಲ್ಲಿ ಮತ್ತೆ ಯಕ್ಷಗಾನ ಸದ್ದು ಮಾಡುತ್ತಿದೆ. ಈ ಬಾರಿ ಕರಾವಳಿಯ ಯುವಕರ ವಾಟ್ಸಪ್ ಸ್ಟೇಟಸ್ ಬರಿ ಈ ಯಕ್ಷಗಾನ ವಿಡಿಯೋದೇ ಸದ್ದು. ಕಲಾರಸಿಕರು ಈ ವಿಡಿಯೋ ನೋಡಿ ನಿಬ್ಬೆರಗಾಗಿದ್ದಾರೆ. ಯಕ್ಷಗಾನ ಬಲ್ಲವರಂತೂ ಮತ್ತೆ ಮತ್ತೆ ಈ ವಿಡಿಯೋ ನೋಡುತ್ತಿದ್ದಾರೆ. ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿರುವ ವಿಡಿಯೋ ಇದು.

ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡಲೇಬೇಕು ಅನಿಸುವ ಈ ವಿಡಿಯೋ ತುಣುಕಿನಲ್ಲಿ ಕುಣಿದ ಭುವನ ಮೋಹಿನಿ ಉಡುಪಿ ಅಂಬಲಪಾಡಿ ಸಮೀಪದ ಕಿದಿಯೂರು ಗ್ರಾಮದ ಚೈತ್ರ ಶೆಟ್ಟಿ, ಮೆಹಂದಿ ಕಾರ್ಯಕ್ರಮದಲ್ಲಿ ಆಕೆಯ ಯಕ್ಷಗಾನ ಕುಣಿತ ಅದು ಈಕೆಯನ್ನು ಮನೆಮಾತಾಗಿಸಿದೆ.

ಬಿಎಸ್ಸಿ ನರ್ಸಿಂಗ್ ಪದವಿ ಪಡೆದಿರುವ ಚೈತ್ರಾ ಅವರು ಮೇ 15ರಂದು ಬುಧವಾರ ಕಟಪಾಡಿ ಸಮೀಪದ ಕುರ್ಕಾಲಿನ ಮನೆಯಲ್ಲಿ ಮದುವೆಗೆ ಮುನ್ನ ನಡೆಯುವ ಮೆಹಂದಿ ಶಾಸ್ತ್ರದಲ್ಲಿ ಸಂಬಂಧಿಕರ ಒತ್ತಾಯಕ್ಕೆ ಮಣಿದು ಯಕ್ಷಗಾನದ ಹೆಜ್ಜೆ ಹಾಕಿದ್ದು, ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಚೈತ್ರಾ ಅವರು 7ನೇ ತರಗತಿಯಿಂದಲೇ ಯಕ್ಷಗಾನದ ಆಸಕ್ತಿ ಹೊಂದಿದ್ದು, ಯಕ್ಷಗುರು ರಾಜೀವ್ ತೋನ್ಸೆ ಅವರಲ್ಲಿ ಯಕ್ಷಗಾನವನ್ನು ಅಭ್ಯಾಸ ಮಾಡಿದ್ದಾರೆ.

ಅನೇಕ ಸಂಘ ಸಂಸ್ಥೆಗಳ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಆದರೆ ಸಾಂಪ್ರದಾಯಿಕ ವೇಷ ಭೂಷಣವಿಲ್ಲದೆ ಮನೆಯಂಗಳದಲ್ಲಿ ನೀಡಿದ ಯಕ್ಷಗಾನ ನಾಟ್ಯವನ್ನು ಸಾಮಾಜಿಕ ತಾಣದಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಬ್ಬಬ್ಬಾ ಅದೆಂಥಾ ಒನಪು.. ಅದೆಂಥಾ ಹುರುಪು.. ಈ ವಿಡಿಯೋ ನೋಡಿದ ಕರಾವಳಿಗರು, ನಿಜಕ್ಕೂ ‘ಯಾರೇ ನೀನು ಭುವನ ಮೋಹಿನಿ’ ಅಂಥ ಕೇಳ್ತಿದ್ದಾರೆ. ಚಂಡೆ ಮದ್ದಳೆಯ ಬೀಟ್ ಗೆ ಸ್ವಲ್ಪವೂ ವಂಚಿಸದೆ ಲಯಬದ್ದ ಹೆಜ್ಜೆ ಹಾಕಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ಭಾಗದಲ್ಲಿ ಹತ್ತರಲ್ಲಿ ಒಬ್ಬನ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ರಾರಾಜಿಸ್ತಿದೆ. ಫೇಸ್ ಬುಕ್ ನಲ್ಲಂತೂ ಸಾವಿರಾರು ಲೈಕ್ ಗಳ ಸುರಿಮಳೆಯಾಗಿದೆ. ಅಂಥಾದ್ದೇನಿದೆ ಈ ವಿಡಿಯೋದಲ್ಲಿ ಅಂದ್ರಾ ಈ ವಿಡಿಯೋನ ಇನ್ನೊಮ್ಮೆ ನೋಡಿ.

ಯಕ್ಷಗಾನದಲ್ಲಿ ಯಾರೇ ನೀನು ಭುವನ ಮೋಹಿನಿ ಅತ್ಯಂತ ಜನಪ್ರಿಯ ಹಾಡು. ‘ಪಾಂಚಜನ್ಯ’ ಯಕ್ಷಗಾನ ಪ್ರಸಂಗದಲ್ಲಿ ಬರುವ ಈ ಹಾಡು ಬಡಗುತಿಟ್ಟಿನ ‘ಸ್ಟಾರ್ ಭಾಗವತ’ ಜನ್ಸಾಲೆ ರಾಘವೇಂದ್ರ ಆಚಾರ್ ಅವರ ಧ್ವನಿಯ ಮೂಲಕ ಪ್ರಸಿದ್ದಿಗೆ ಬಂತು. ಈ ಪ್ರಸಂಗದಲ್ಲಿ ಬರುವ ಕೃಷ್ಣ ಮತ್ತು ಅಸಿಕೆಯ ನಡುವಿನ ಪ್ರೇಮ ಸಲ್ಲಾಪದ ಹಾಡು ಅಭಿಮಾನಿಗಳ ಮೆಚ್ಚಿನ ದೃಶ್ಯವಾಗಿದೆ. ಒರಿಜಿನಲ್ ಕಲಾವಿದರಿಗೆ ಸರಿಸಾಟಿಯಾಗುವಂತೆ ಈ ವೈರಲ್ ಹುಡುಗಿ ಹಾಕಿರುವ ಹೆಜ್ಜೆ ಕಂಡು ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

VIDEO