KARNATAKA
ಆರಿಹೋಯ್ತು ಎಣ್ಣೆ, ಬತ್ತಿ ಇಲ್ಲದೇ 46 ವರ್ಷದಿಂದ ಉರಿಯುತ್ತಿದ್ದ ದೀಪನಾಥೇಶ್ವರದ 3 ದೀಪ!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಕಾರವಾರ: ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ಪ್ರತಿಷ್ಠಿತ ದೀಪನಾಥೇಶ್ವರ ದೇವಾಲಯದ ಮೂರು ದೀಪಗಳು ನಂದಿ ಹೋಗಿವೆ.
1979 ರಲ್ಲಿ ದೈವಜ್ಞ ಶಾರದಮ್ಮ ಎಂಬವರು ಸೀಮೆಎಣ್ಣೆ ಹಾಕಿ ಈ ದೀಪವನ್ನು ಬೆಳಗಿಸಿದ್ದರು. ಅಲ್ಲಿಂದ ಈವರೆಗೂ ಈ ದೀಪ ಎಣ್ಣೆ, ಬತ್ತಿಯಿಲ್ಲದೇ ಬೆಳಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ನೂರಾರು ಜನರು ಭೇಟಿ ನೀಡಿ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಿದ್ದು, ದೀಪನಾಥೇಶ್ವರ ಎಂಬ ಹೆಸರಿನಲ್ಲಿ ಆಸ್ತಿಕರು ಪೂಜೆಗಳನ್ನು ನಡೆಸುತ್ತಿದ್ದರು ಎಂಬುದು ಸ್ಥಳೀಯರ ಅಭಿಪ್ರಾಯ. ಕಳೆದ 14 ದಿನದ ಹಿಂದೆ ದೀಪದ ಉಸ್ತುವಾರಿ ನೋಡಿಕೊಳ್ಳುತಿದ್ದ ವೆಂಕಟೇಶ್ ಎಂಬವರು ಮೃತರಾಗಿದ್ದು, ಸೂತಕದ ಹಿನ್ನಲೆಯಲ್ಲಿ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿತ್ತು. ಆದರೆ, ಬುಧವಾರ ದೇವಸ್ಥಾನದ ಗರ್ಭಗುಡಿಯನ್ನು ಸ್ವಚ್ಛ ಮಾಡಲು ಕುಟುಂಬಸ್ಥರು ತೆರಳಿದಾಗ ದೀಪ ಆರಿರುವುದು ಬೆಳಕಿಗೆ ಬಂದಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ದೀಪ ಆರಿದರೆ ರಾಜ್ಯ ಆಳುವವರಿಗೆ ಕೆಡುಕಾಗಲಿದೆ ಎಂದು ಜನ ನಂಬಿದ್ದು, ಗ್ರಾಮಕ್ಕೂ ತೊಂದರೆಯಾಗಲಿದೆ ಎಂಬುದು ಇಲ್ಲಿನ ಭಕ್ತರ ಅನಿಸಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಗರ್ಭಗುಡಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಮುಚ್ಚಿದ್ದು, ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಿದೆ.
ಇತಿಹಾಸ ಏನು?
ಚಿಗಳ್ಳಿ ಗ್ರಾಮದ ದೈವಜ್ಞ ಶಾರದಮ್ಮ ಎನ್ನುವವರು 1979ರಲ್ಲಿ ಸೀಮೆಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಆದರೆ, ಅದು ಒಂದು ದಿನ ಕಳೆದರೂ ಆರಲಿಲ್ಲ. ನಿರಂತರವಾಗಿ ಉರಿಯತೊಡಗಿತು. ಇದರಿಂದ ಕುತೂಹಲಗೊಂಡ ಶಾರದಮ್ಮ, ಒಂದು ವರ್ಷದವರೆಗೆ ಕಾಯ್ದು ಮತ್ತೊಂದು ದೀಪವನ್ನು 1980ರಲ್ಲಿ ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯ ತೊಡಗಿತು. 2ನೇ ದೀಪ ಹಚ್ಚಿದ 10-15 ದಿನಗಳ ನಂತರ ಮತ್ತೊಂದು 3ನೇ ದೀಪ ಬೆಳಗಿಸಿದರು. ಪವಾಡ ಎಂಬಂತೆ 3ನೇ ದೀಪ ಸೇರಿ ಮೂರು ದೀಪಗಳು ನಿರಂತರವಾಗಿ ಉರಿಯ ತೊಡಗಿದವು ಎಂಬುದು ಸ್ಥಳೀಯರ ಮಾತು. 1979ರಿಂದ 2025ರ ಫೆಬ್ರವರಿ ವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಈಗ ಏಕಾಏಕಿ ಆರಿ ಹೋಗಿದೆ.
ದೀಪ ಹಚ್ಚಿದ್ದ ಶಾರದಮ್ಮ ಅವರು ಕೆಲವು ವರ್ಷಗಳ ನಂತರ ನಿಧನರಾದರು. ಆದರೂ ದೀಪಗಳು ಇಲ್ಲಿವರೆಗೆ ಉರಿದುಕೊಂಡು ಬರುತ್ತಿದ್ದು ನಂದಾದೀಪ ಎನಿಸಿತ್ತು. 14 ದಿನದ ಹಿಂದೆ ಈ ದೀಪದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅರ್ಚಕ ವೆಂಕಟೇಶ್ ನಿಧನರಾದರು. ಈ ಹಿನ್ನೆಲೆಯಲ್ಲಿ ಸೂತಕವಿದ್ದ ಕಾರಣ ದೇವಸ್ಥಾನದ ಗರ್ಭಗುಡಿ ಮುಚ್ಚಲಾಗಿತ್ತು. ಫೆ.5ರಂದು ಪೂಜೆಗಾಗಿ ಗರ್ಭಗುಡಿ ತೆರೆದಾಗ ದೀಪ ಆರಿರುವುದು ಗಮನಕ್ಕೆ ಬಂದಿದೆ.
ಆರದ ನಂದಾದೀಪ ಆರಿಹೋದಾಗ ಭಕ್ತರಲ್ಲಿ ನೋವು ತರಿಸಿದೆ. ಇಷ್ಟು ದಿನ ಆರದ್ದು ಈಗ ಆರಿರುವುದು ಕೆಡುಕಿನ ಸಂಕೇತ. ರಾಜ್ಯ ಆಳುವವರಿಗೂ ಕೆಡುಕಾಗಲಿದೆ. ಗ್ರಾಮಕ್ಕೂ ಕೆಡುಕು ಎಂಬ ಮಾತುಗಳು ಕೇಳಿಬರುತ್ತಿವೆ. ದೀಪವನ್ನು ನೋಡಲು ಜನ ಮಿಗಿಬಿದ್ದಿದ್ದಾರೆ. ನಂತರ ಈ ದೇವಸ್ಥಾನದ ಗರ್ಭಗುಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ