BANTWAL
ದಿಗಂತ್ ನಾಪತ್ತೆ ಪ್ರಕರಣ – ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ

ಬೆಂಗಳೂರು ಮಾರ್ಚ್ 06: ನಿಗೂಢವಾಗಿ ನಾಪತ್ತೆಯಾಗಿರುವ ವಿಧ್ಯಾರ್ಥಿ ದಿಗಂತ್ ಪತ್ತೆ ಹಚ್ಚಲು ಇದೀಗ ದಿಗಂತ್ ಪೊಷಕರು ಹೈಕೋರ್ಟ್ ಮೊರೆ ಹೋಗಿದ್ದು, ಮಗನನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ದಿಗಂತ್ ತಂದೆ ಪದ್ಮನಾಭ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

ಜಸ್ಟೀಸ್ ವಿ.ಕಾಮೇಶ್ವರ್ ರಾವ್, ಜಸ್ಟೀಸ್ ಟಿ.ಎಂ ನಡಾಫ್ರಿಂದ ಹೈಕೋರ್ಟ್ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ಮಾಡಲಾಗಿದ್ದು, ಮಾರ್ಚ್ 12 ರ ಒಳಗೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಆದೇಶಿಸಲಾಗಿದೆ. ಮಾರ್ಚ್ 13ಕ್ಕೆ ವಿಚಾರಣೆ ಮುಂದೂಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ದಿಗಂತ್, ಫೆಬ್ರವರಿ 25ರ ಸಂಜೆಯಿಂದ ನಾಪತ್ತೆಯಾಗಿದ್ದ. ಫರಂಗಿಪೇಟೆ ಆಂಜನೇಯ ವ್ಯಾಯಾಮ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ದಿಗಂತ್, ದೇವಸ್ಥಾನಕ್ಕೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದ.

ಬಳಿಕ ಫರಂಗಿಪೇಟೆಯಲ್ಲಿ ರೈಲ್ವೆ ಹಳಿಯಲ್ಲಿ ದಿಗಂತ್ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಒಂದು ಚಪ್ಪಲಿಯಲ್ಲಿ ರಕ್ತದ ಕಲೆ ಕಂಡುಬಂದಿತ್ತು. ಸದ್ಯ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ನಾಪತ್ತೆಯಾದ ಸಂದರ್ಭದಲ್ಲಿ ಪೊಲೀಸರು ದೂರು ಸ್ವೀಕರಿಸಿ ತಕ್ಷಣವೇ ಕ್ರಮಕೈಗೊಳ್ಳದ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆರಂಭದಲ್ಲೇ ಸರಿಯಾದ ನಿಟ್ಟಿನಲ್ಲಿ ತನಿಖೆ ಆರಂಭಿಸದ ಪೊಲೀಸರು ದಿಗಂತ್ ಪತ್ತೆಗೆ ಅವಕಾಶ ಇದ್ದ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ. ಮಾರ್ಚ್ 1 ರಂದು ಫರಂಗಿಪೇಟೆ ಬಂದ್ ಮಾಡಿದ ಬಳಿಕ ಏಳು ತನಿಖಾ ತಂಡಗಳನ್ನು ರಚಿಸಿ ತನಿಖೆಯನ್ನು ಆರಂಭಿಸಿದ್ದಾಗಿ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.