Connect with us

FILM

ಕ್ಷಮಿಸಿ, ‘ದೂದ್ ಪೇಡಾ’ ದಿಗಂತ್ ಖಾತೆಯಲ್ಲಿ ಹಣವಿಲ್ಲ…!?

ಬೆಂಗಳೂರು, ಅಕ್ಟೋಬರ್ 26: ‘ಕ್ಷಮಿಸಿ, ನಟ ದಿಗಂತ ಖಾತೆಯಲ್ಲಿ ಹಣವಿಲ್ಲ’- ಹೀಗೊಂದು ಹೇಳಿಕೆ ಕೇಳುತ್ತಿದ್ದಂತೆಯೇ ನಿಮಗೆಲ್ಲ ಅಚ್ಚರಿಯಾಗುವುದು ನಿಶ್ಚಿತ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಬೇಡಿಕೆಯ ನಟರಲ್ಲಿ ದಿಗಂತ್ ಕೂಡ ಒಬ್ಬರು. ಅವರ ಖಾತೆಯಲ್ಲಿ ಹಣವಿಲ್ಲವೇ? ಹಾಗೆಲ್ಲ, ಈ ಹೇಳಿಕೆಯ ಹಿಂದೆ ಒಂದು ಇಂಟರೆಸ್ಟಿಂಗ್ ವಿಚಾರವಿದೆ! ಅದೇನೆಂದರೆ, ದಿಗಂತ್ ಹೊಸದೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಸಿನಿಮಾದ ಶೀರ್ಷಿಕೆಯೇ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂದು!

ಸಾಮಾನ್ಯವಾಗಿ, ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಖಾಲಿಯಾದರೆ, ಫೋನ್‌ ರೀಚಾರ್ಜ್ ಮಾಡಿಸದೆಯೇ ಇದ್ದಾಗ ಇಂಥದ್ದೊಂದು ಹೇಳಿಕೆಯನ್ನು ಕೇಳಿರುತ್ತೇವೆ. ಆದರೆ, ಈ ಬಾರಿ ದಿಗಂತ್ ತಮ್ಮ ಸಿನಿಮಾಕ್ಕೆ ಇಂಥದ್ದೊಂದು ಶೀರ್ಷಿಕೆ ಇಟ್ಟುಕೊಂಡಿದ್ದಾರೆ. ವಿಶೇಷವೆಂದರೆ, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಚಿತ್ರೀಕರಣವು ಸಿಗಂದೂರು, ನಿಟ್ಟೂರು ಸುತ್ತಮುತ್ತ ನಡೆಯಲಿದೆ. ಮಲೆನಾಡಿನ ಬದುಕನ್ನು ಬಿಂಬಿಸುವ ಈ ಚಿತ್ರದಲ್ಲಿ ಮೊದಲ ಬಾರಿಗೆ ದಿಗಂತ್ ಅಡಿಕೆ ಬೆಳೆಗಾರನಾಗಿ ಮತ್ತು ಗೊಬ್ಬರದ ಅಂಗಡಿ ಮಾಲೀಕನಾಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರಂತೆ. ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಚಿತ್ರಕಥೆ ಮಾಡಲಾಗಿದೆ. ಅವರ ಪತ್ನಿ, ನಟಿ ಐಂದ್ರಿತಾ ರೇ ವಕೀಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಕೂಡ ಪ್ರಮುಖ ಪಾತ್ರ ಮಾಡಲಿದ್ದಾರೆ.

ನಟ ದಿಗಂತ್ ಮತ್ತು ಐಂದ್ರಿತಾ ರೇ ಮದುವೆಗೂ ಮೊದಲು ‘ಮನಸಾರೆ’, ‘ಪಾರಿಜಾತ’ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. 2018ರಲ್ಲಿ ಅವರಿಬ್ಬರು ಮದುವೆ ಆದರು. ಆದರೆ, ಮದುವೆ ನಂತರ ಒಟ್ಟಿಗೆ ತೆರೆಮೇಲೆ ಮಾತ್ರ ಇಬ್ಬರು ಕಾಣಿಸಿಕೊಂಡಿರಲಿಲ್ಲ. ಇದೀಗ ಮದುವೆಯಾದ ಮೇಲೆ ಮೊದಲ ಬಾರಿಗೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಮೂಲಕ ಚೊಚ್ಚಲ ಬಾರಿಗೆ ವಿನಾಯಕ ಕೋಡ್ಸರ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಉಪೇಂದ್ರ ಹೀರೋ ಆಗಿದ್ದ ಮೊದಲ ಸಿನಿಮಾ ‘ಎ’ ನಿರ್ಮಾಣ ಮಾಡಿದ್ದ ಸಿಲ್ಕ್ ಮಂಜು ಇದರ ನಿರ್ಮಾಪಕರು. ಪ್ರಜ್ವಲ್ ಪೈ ಸಂಗೀತ ನೀಡುತ್ತಿದ್ದು, ನಂದಕಿಶೋರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರಕಥೆ ಬರೆಯುವುಕ್ಕೆ ಸಾಥ್ ನೀಡುವುದರ ಜೊತೆಗೆ ಸಂಭಾಷಣೆಯನ್ನು ಬರೆಯಲಿದ್ದಾರೆ ವೇಣು ಹಸ್ರಾಳಿ.

https://twitter.com/nimmaupendra/status/1320657469782200321

ಇನ್ನು, ದಿಗಂತ್ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಚೆಗಷ್ಟೇ ‘ಮಾರಿಗೋಲ್ಡ್’ ಸಿನಿಮಾದ ಶೂಟಿಂಗ್‌ ಬಹುತೇಕ ಮುಗಿಸಿರುವ ಅವರು, ಹರಿಪ್ರಿಯಾ, ವಸಿಷ್ಠ ಸಿಂಹ ಜೊತೆಗೆ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ತೆಲುಗಿನ ಎವರು ಚಿತ್ರದ ರಿಮೇಕ್ ಆಗಿರುವ ಈ ಸಿನಿಮಾಕ್ಕೆ ಈಚೆಗಷ್ಟೇ ಮುಹೂರ್ತ ನೆರವೇರಿತು. ಇನ್ನು, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಶೀರ್ಷಿಕೆಯನ್ನು ನಟ ಉಪೇಂದ್ರ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *