Connect with us

LATEST NEWS

ಹಿಂದೂ ಸಂಪ್ರದಾಯ ಮುರಿದು ಹವನದಲ್ಲಿ ಭಾಗಿ, ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಆಕ್ರೋಶ….

ಸೋಲನ್, ಅಕ್ಟೋಬರ್ 26: ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ದೇವಸ್ಥಾನದ ಹೋಮ,ಹವನದಲ್ಲಿ ಕುಳಿತು ಅನಾದಿ ಕಾಲದಿಂದ ಆಚರಣೆಯಲ್ಲಿದ್ದ ದೇವಸ್ಥಾನದ ಸಂಪ್ರದಾಯ ಮುರಿದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಹಿಮಾಚಲಪ್ರದೇಶದ ಸೋಲನ್ ನ ಶಲೂನಿ ದೇವಿ ದೇವಸ್ಥಾನದಲ್ಲಿ ಇಂದು ದಸರಾ ಪ್ರಯುಕ್ತ ಹೋಮ, ಹವನಗಳನ್ನು ಏರ್ಪಡಿಸಲಾಗಿತ್ತು. ಈ ದೇವಸ್ಥಾನವು ಧಾರ್ಮಿಕ ಧತ್ತಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ ದೇವಸ್ಥಾನವಾಗಿರುವುದರಿಂದ ದೇವಸ್ಥಾನದ ಉಸ್ತುವಾರಿಯು ಸೋಲನ್ ಜಿಲ್ಲಾಧಿಕಾರಿ ರಿತಿಕಾ ಜಿಂದಾನ್ ಎನ್ನುವ ಮಹಿಳಾ ಐಎಎಸ್ ಅಧಿಕಾರಿಯ ಬಳಿಯಿತ್ತು.

ಈ ಕಾರಣಕ್ಕಾಗಿ ಹೋಮ , ಹವನ ನಡೆಯುತ್ತಿದ್ದ ದೇವಸ್ಥಾನಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರಿತಿಕಾ ಜಿಂದಾನ್ ತಾನೂ ಹೋಮದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಆದರೆ ದೇವಸ್ಥಾನದ ಅರ್ಚಕ ವರ್ಗ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅನಾದಿ ಕಾಲದಿಂದಲೂ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಹೋಮ, ಹವನದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ.

ದೇವಸ್ಥಾನದ ರೀತಿ-ರಿವಾಜುಗಳಿಗೆ ಇದರಿಂದ ಚ್ಯುತಿ ಬರಲಿದೆ ಎಂದು ಜಿಲ್ಲಾಧಿಕಾರಿಗೆ ವಿನಂತಿಸಿದ್ದರು. ಆದರೆ ಪಟ್ಟು ಬಿಡದ ರಿತಿಕಾ ಜಿಂದಾನ್ ತನ್ನ ಅಧಿಕಾರ ಬಳಸಿ ಹೋಮ,ಹವನದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಧಿಕಾರಿಯ ಈ ರೀತಿಯ ವರ್ತನೆ ಕ್ಷೇತ್ರದ ಭಕ್ತರ ಹಾಗೂ ಅರ್ಚಕರ ಆಕ್ರೋಶಕ್ಕೆ ಕಾರಣವಾಗಿದ್ದು, ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಂದು ಸಂಪ್ರದಾಯದ ಆಚರಣೆಯ ವಿರುದ್ಧ ಅಧಿಕಾರ ಚಲಾಯಿಸುವುದು ಎಷ್ಟು ಸಮಂಜಸ ಎನ್ನುವ ಚರ್ಚೆಯೂ ಇದೀಗ ಈ ಘಟನೆಯ ಬಳಿಕ ದೇಶದಾದ್ಯಂತ ಆರಂಭಗೊಂಡಿದೆ.