Connect with us

  LATEST NEWS

  ಸಿರಿಯಲ್ ಗೂ ಬಂತು ದೈವಾರಾಧನೆ – ದೈವಾರಾಧಕರ ಆಕ್ರೋಶ

  ಮಂಗಳೂರು, ಫೆಬ್ರವರಿ 10: ರಿಷಭ್ ಶೆಟ್ಟಿ ನಿರ್ದೇಶನ ಕಾಂತಾರ ಬಳಿಕ ಕರಾವಳಿಯ ದೈವರಾಧನೆ ಮನರಂಜನೆ ಸರಕಾಗಿ ಪರಿಣಮಿಸಿದೆ. ಕಾಂತಾರ ಬಳಿಕ ಪ್ರತಿಯೊಂದು ಕಾರ್ಯಕ್ರಮ ದೈವಾರಾಧನೆಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ಕಾರ್ಯಕ್ರಮಗಳು ಇರಲಾರಂಭಿಸಿದೆ. ಇದೀಗ ಕನ್ನಡ ಖಾಸಗಿ ವಾಹಿನಿಯೊಂದರ ಸಿರಿಯಲ್ ನಲ್ಲಿ ದೈವಾರಾಧನೆಗೆ ಸಂಬಂಧಿಸಿದಂತೆ ದೃಶ್ಯಗಳನ್ನು ಶೂಟ್ ಮಾಡಿದ್ದು, ಸ್ವತಃ ಕರಾವಳಿಯ ನಟರೊಬ್ಬರು ಅದರಲ್ಲಿ ನಟಿಸಿದ್ದು, ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.


  ಕನ್ನಡದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಕಾವೇರಿ ಕನ್ನಡ ಮಿಡಿಯಂ ಧಾರವಾಹಿಯ ಪ್ರೋಮೋ ಒಂದು ಇದೀಗ ರೀಲಿಸ್ ಆಗಿದ್ದು, ಅದರಲ್ಲಿ ದೈವಾರಾಧನೆಯ ಕುರಿತ ವಿಡಿಯೋ ಶೂಟಿಂಗ್ ಆಗಿದ್ದು, ಇದೀಗ ವೈರಲ್ ಆಗಿದೆ. ಇದರ ಬೆನ್ನಲ್ಲೇ ಈ ಪ್ರೋಮೋ ಕರಾವಳಿಗಳ ಸಿಟ್ಟಿಗೆ ಕಾರಣವಾಗಿದ್ದು, ಇತ್ತೀಚೆಗಷ್ಟೇ ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ಧ ದೈವಾರಾಧಕರು ಕೊರಗಜ್ಜನ ಮೊರೆ ಹೋಗಿದ್ದ ಘಟನೆ ನಡೆದಿತ್ತು. ಸದ್ಯ ಈಗ ದೈವಾರಾಧನೆ ಪ್ರದರ್ಶನ ಧಾರವಾಹಿಗೂ ವ್ಯಾಪಿಸಿದ್ದು ಕರಾವಳಿಯಲ್ಲಿ ದೈವಾರಾಧಕರ ಆಕ್ರೋಶ ಭುಗಿಲೆದ್ದಿದೆ. ದಿನೇ ದಿನೇ ತುಳುನಾಡು ವಿಶಿಷ್ಟ, ಧಾರ್ಮಿಕ ಆಚರಣೆಗೆ ಧಕ್ಕೆಯಾಗುತ್ತಿದೆ ಎಂದು ದೈವಾರಾಧಕರು ಅಸಮಾಧಾನ ಹೊರ ಹಾಕಿದ್ದಾರೆ.


  ಸಿರಿಯಲ್ ನಲ್ಲಿ ದೈವಾರಾಧನೆ ಪ್ರದರ್ಶನ ಬೆನ್ನಲ್ಲೇ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೈವದ ಪಾತ್ರ ನಿರ್ವಹಿಸಿದ ಕಲಾವಿದನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಕಲಾವಿದ ಮಂಗಳೂರಿನ ಪ್ರಶಾಂತ್ ಸಿ.ಕೆ ಹಾಗೂ ಧಾರವಾಹಿ ನಿರ್ದೇಶಕನ ವಿರುದ್ಧ ಪ್ರಕರಣ ದಾಖಲಿಸಲು ದೈವಾರಾಧಕರು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಧಾರವಾಹಿ ತೆರೆ ಮೇಲೆ ಬರಬಾರದೆಂದು ಪಟ್ಟು ಹಿಡಿದಿದ್ದಾರೆ. ಧಾರವಾಹಿಯ ಪ್ರೋಮೋ ವಿಡಿಯೋ ವೈರಲ್ ಬೆನ್ನಲ್ಲೇ ದೈವಾರಾಧಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಮಂಗಳೂರಿನ ತುಳುನಾಡ ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಹಾಗು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದೆ. ಚಿತ್ರೀಕರಣಕ್ಕೆ ಸುಳ್ಳು ಹೇಳಿ ಬ್ಯಾಂಡ್ ವಾದ್ಯದವರನ್ನು ಕರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದೈವಸ್ಥಾನದಲ್ಲಿ ಕೋಲ ಇದೆ ಎಂದು ಹೇಳಿ ದೇವಸ್ಥಾನದ ಬ್ಯಾಂಡ್ ವಾದ್ಯದವರನ್ನು ಕರೆಸಿದ್ದಾರೆ ಎಂದು ದೈವಾರಾಧಕರ ವೇದಿಕೆ ಧಾರವಾಹಿ ತಂಡದ ಮೇಲೆ ಆರೋಪ ಮಾಡಿದ್ದಾರೆ.


  ದೈವಾರಾಧನೆ ನಮ್ಮ ಸಮಾಜದ ಕರ್ತವ್ಯ. ಸೀಮಿತ ಸಮಾಜದವರು ಮಾತ್ರ ದೈವ ನರ್ತನ ಮಾಡಬೇಕು. ಈಗ ಚದ್ಮವೇಷದಂತೆ ಪ್ರತಿಯೊಬ್ಬರು ವೇಷ ಹಾಕಿಕೊಂಡು‌ ಹಣ ಮಾಡುತ್ತಿದ್ದಾರೆ. ಈ ರೀತಿಯ ಘಟನೆಗಳಿಂದ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಸಾಂಪ್ರದಾಯಿಕವಾಗಿ ದೈವ ನರ್ತನ ಸೇವೆ ನಡೆಯುವಲ್ಲಿಯೇ ಅದು ನಡೆಯಬೇಕು. ಸಿನಿಮಾ, ಧಾರವಾಹಿ, ವೇದಿಕೆಗಳಲ್ಲಿ ದೈವಾರಾಧನೆ ಪ್ರದರ್ಶನ ಸಲ್ಲದು. ನಾವು ಆ ರೀತಿಯ ಪ್ರದರ್ಶನಗಳಿಗೆ ಅವಕಾಶ ನೀಡೋದಿಲ್ಲ. ಇದರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ. ಸಿನಿಮಾ, ಧಾರವಾಹಿ ಯಾವುದರಲ್ಲೂ ದೈವಾರಾಧನೆಯನ್ನ ಬಳಸಿಕೊಳ್ಳಬಾರದು. ಇದು ನಮ್ಮ ಜನಾಂಗೀಯ ನಿಂದನೆ. ಮುಂದೆ ಇದರ ವಿರುದ್ಧ ಕಾನೂನಾತ್ಮಕ ಹೋರಾಟವನ್ನ ನಡೆಸುತ್ತೇವೆ ಎಂದು ದೈವಾರಾಧಕರು ಎಚ್ಚರಿಕೆ ನೀಡಿದ್ದಾರೆ.

  ಈ ನಡುವೆ ಧಾರವಾಹಿಯಲ್ಲಿ ದೈವದ ಪಾತ್ರ ನಿರ್ವಹಿಸಿದ ಕಲಾವಿದ ಪ್ರಶಾಂತ್ ಸಿಕೆ ಅವರು ಕರಾವಳಿಗರ ಕ್ಷಮೆ ಕೇಳಿದ್ದು, ಕಲಾವಿದನಾಗಿ ನಾನು ಅದರಲ್ಲಿ ನಟಿಸಿದ್ದೆ, ಇನ್ನು ಮುಂದೆ ಈ ರೀತಿಯ ಯಾವುದೇ ದೈವಾರಾಧನೆಗೆ ಸಂಬಂಧಿಸಿದ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply