LATEST NEWS
ದಿನಕ್ಕೊಂದು ಕಥೆ- ದುಸ್ತರ
ದುಸ್ತರ
ನಾಲ್ಕು ಗೋಡೆಗಳನ್ನು ದಾಟಲೇ ಇಲ್ಲ ಸುದ್ದಿ. ಯಾಕಿರಬಹುದು? ಅದೇನು ರಸಬರಿತವಲ್ಲ! ಕಣ್ಣಗಲಿಸಿ ,ಕಿವಿಕೊಟ್ಟು ,ನಾಲಿಗೆ ಚಪ್ಪರಿಸಿ ಕೇಳುವ ಸುದ್ದಿಯಲ್ಲವಾದ ಕಾರಣ.ಬದುಕಿನ ಚಕ್ರ ಸಾಗುತ್ತಿತ್ತು ತಗ್ಗುದಿಣ್ಣೆಗಳನ್ನ, ಹೊಂಡ ಗುಂಡಿಗಳನ್ನ ನಿಭಾಯಿಸುತ್ತಾ ಸಾಗತ್ತಿದ್ದಾಗ ಕಂದಕವೊಂದು ಅಡ್ಡ ಬಂದಾಗಿತ್ತು .
ಕಲಾಸಕ್ತಿಯ ಅಭಿರುಚಿಯನ್ನ ಬದಿಗೊತ್ತಿ ಅಕೌಂಟೆಂಟ್ ಕೆಲಸವನ್ನು ಮಾಡುತ್ತಿದ್ದ. ಮನೆ ಮಡದಿ ಮಕ್ಕಳ ಹೊಟ್ಟೆ ಬಟ್ಟೆ ಶಿಕ್ಷಣ ಸಾಗಬೇಕಾದರೆ ಅದು ಅನಿವಾರ್ಯ. ಆಗಲೇ ಕಲಾ ಸೇವೆಗೆ ಕರೆ ಬಂದಿತ್ತು ,ಸಂಭಾವನೆಯೂ ನಿಗದಿಯಾಯಿತು. ರಾಜೀನಾಮೆ ನೀಡಿ ಹೊರಟ. ಆಗಲೇ ಕರೋನವೈರಸ್ ಕಂದಕ ಎದುರಾಗಿ ಕಲಾಕ್ಷೇತ್ರ ಎಲ್ಲವನ್ನು ಮತ್ತೆ ಪೆಟ್ಟಿಗೆಯೊಳಗೆ ಸೇರಿಸಿತು.ಈಗ ಬಂಡಿಯನ್ನು ಸಾಗಿಸುವುದು ದುಸ್ತರವಾಯಿತು .
“ಸರ್ ಮಗಳ ಫೀಸು ಯಾವಾಗ”
“ಕರೆಂಟ್ ಬಿಲ್ ಕಟ್ಟದೆ ಎರಡು ತಿಂಗಳಾಯಿತು”
“ರೀ ಊಟಕ್ಕೆ ಏನ್ ಮಾಡೋದು”
ಇಲ್ಲಿ ಪ್ರಶ್ನೆಗೆ ತಕ್ಕ ಉತ್ತರವಿಲ್ಲ. ಎಲ್ಲದಕ್ಕೂ ಒಂದೇ ಉತ್ತರ “ಮೌನ”.
ನೋವು ಬೇಡವೆಂದರೂ ಕಣ್ಣು ತೇವವಾಗಿ ಕಣ್ಣೀರು ಜಾರುತ್ತಿತ್ತು. ಮನೆಯವರ ಅರಿವಿಗರ ಬಾರದಂತೆ ಮರೆಗೆ ಹೋಗಿ ಒರೆಸಿ ನಿಲ್ಲುತ್ತಿದ್ದ. ಸಂಬಂಧದ ಕೆಲವು ಕೈಗಳು ಹಿಡಿದು ನಿಲ್ಲಿಸಿದವು. ಎಷ್ಟು ದಿನ!. ಕೆಲಸದ ಹುಡುಕಾಟ ಸಾಗಿತ್ತು. ಕೆಲವೊಂದು ಚುಚ್ಚು ನುಡಿಗಳು ಇನ್ನೊಂದಿಷ್ಟು ಹಿತನುಡಿಗಳು ಉಚಿತವಾಗೇ ದೊರಕಿದವು. ದಿನವೂ ಕಾರ್ಮೋಡ ಸರಿದು ಕಾಣೋ ಸೂರ್ಯನ ಪೂರ್ಣ ದರ್ಶನಕ್ಕೆ ಕೈಯೆತ್ತಿ ಬೇಡುತ್ತಿದ್ದಾನೆ ಪರಶುರಾಮ. ಅವನೊಳಗಿನ ಪ್ರಾರ್ಥನೆಯನ್ನು ಗಾಳಿ ಪಡೆದುಕೊಂಡು ಮೇಲಕ್ಕೇರುತ್ತಾ ಸೂರ್ಯನಿಗೆ ತಲುಪಿಸಲು ಹೊರಟಿದೆ …….
ಧೀರಜ್ ಬೆಳ್ಳಾರೆ