LATEST NEWS
ದಿನಕ್ಕೊಂದು ಕಥೆ- ಬರಿದಾಗದ ಬದುಕು
ಬರಿದಾಗದ ಬದುಕು
ಚೇಳ್ಯಾರಿನ ಆ ಏರು ಹತ್ತಿದರೆ ಅಲ್ಲೇ ಬಲ ಬದಿಗಿನ ಎರಡನೇ ಮನೆ ನಮ್ಮ ಗೋಪಿ ಅಜ್ಜಿದು. ಬೆನ್ನು ಬಾಗಿದರೂ ನೆರಿಗೆಗಳಿಗೆ ವಯಸ್ಸಾದರೂ ತುಟಿಯ ನಗು ಮಾಸಿಲ್ಲ. ಎಂಥವರಿಗೂ ಒಮ್ಮೆ ಮುದ್ದಿಸಬೇಕೆನ್ನುವ ಅಜ್ಜಿಯ ಪ್ರಸನ್ನತೆ. ತನ್ನ ಯೌವನದಲ್ಲಿ ಎಷ್ಟು ಯುವಕರ ನಿದ್ದೆಗೆಡಿಸಿದ್ದಳೋ ಏನೋ.
ಈಗ ಮನೆತನದ ಹಿರಿಯ ಬೇರಾಗಿದ್ದಾಳೆ. ಆ ಕುಟುಂಬದ ಅಷ್ಟೇಕೆ ಊರಿನ ಎಲ್ಲಾ ಹಸುಗೂಸುಗಳ ಹೊಕ್ಕಳುಬಳ್ಳಿ ಕತ್ತರಿಸಿ ಮೊದಲ ಸ್ಥಾನ ಮಾಡಿಸಿದವಳು, ತನ್ನ ಕಾಲ ಮೇಲೆ ಬೋರಲಾಗಿ ಮಲಗಿಸಿ ಎಣ್ಣೆ ತಿಕ್ಕಿದವಳು. ಕೆಲವು ಜನನದಲ್ಲಿ ಮರಣಿಸಿದ ಮಗುವಿನ ತಾಯಿಯ ತೇವವಾದ ಹೃದಯಕ್ಕೆ ಆಸರೆಯಾಗಿದ್ದವಳು. ತಾಯ್ತನವ ಕಲಿಸಿದವಳು. ಹೆರಿಗೆಯ ಸಂದರ್ಭ ಹಣೆಯ ಬೆವರು ಒರಿಸಿ “ನಗು ಮಗಳೇ, ಅದು ದೇವನಿಗೆ ಮುಟ್ಟಿದರೆ ಎಲ್ಲವೂ ಸರಾಗವಾಗುತ್ತದೆ” ಅನ್ನುತ್ತಾ ಕೈಹಿಡಿದು ಪಕ್ಕ ನಿಲ್ಲೋಳು.
ಮನೆಯ ಮಕ್ಕಳಿಗೆ ಊರ ಮನಸ್ಸುಗಳ ಆರೋಗ್ಯಕ್ಕೆ ಮದ್ದುಗಳು ಒಂದೆರಡು ಮಾತುಗಳು ಸದಾ ಜೋಳಿಗೆಯಲ್ಲಿ. ಹಿರಿಯರಿಂದ ಬಂದ ಬಳುವಳಿ ಇವಳೊಳಗೆ ನಿಂತು ನುಡಿಸುತ್ತಿದೆ. ಇವಳ ನಡಿಗೆ ನಿಧಾನವಾಗಿ ಚರ್ಮಗಳು ಜೋತಾಡಿದರೂ, ಮನೆಯವರ ಪ್ರೀತಿ ಹೆಚ್ಚಾಗುತ್ತಲೇ ಸಾಗಿದೆ .ಇನ್ನೂ ಎಲ್ಲರನ್ನ ಮಕ್ಕಳಂತೆ ಪಾಲಿಸುತ್ತಾಳೆ .
ನಿದ್ದೆ ಕೆಟ್ಟಿದ್ದಾಳೆ ಕುಟುಂಬಕ್ಕೆ. ಗೋಪಿ ಇದ್ದಲ್ಲಿ ನಗುವಿಗೆ ಬರವಿಲ್ಲ ಬದುಕಿಗೂ ಕೂಡ. ಒಮ್ಮೆ ಅವಳ ಬಳಿ ಕೂತು ಕಣ್ಣೊಳಗೆ ಗಮನಿಸಿದರೆ ಜೀವನ ಸಾರ್ಥಕ್ಯದ ಜೊತೆ ಬದುಕಬೇಕೆನ್ನುವ ಆಸೆ ಹುಟ್ಟುತ್ತದೆ . ಅವಳ ಮಡಿಲಲ್ಲಿ ಮಲಗಿದ್ದಾಗ ನನ್ನೊಳಗೆ ಬೆಳೆದ ಯೋಚನೆಗಳ ಸರಣಿಯಷ್ಟೆ ಇವು. ಅವಳ ಕೈ ನನ್ನ ಹಣೆ ಸವರಿದೆ. ಪ್ರೀತಿ ಇನ್ನೂ ತುಂಬುತ್ತಲೇ ಇದೆ ಆ ಕಣ್ಣುಗಳಲ್ಲಿ …
ಧೀರಜ್ ಬೆಳ್ಳಾರೆ