Connect with us

LATEST NEWS

ದಿನಕ್ಕೊಂದು ಕಥೆ- ಉಳಿಸುವಿರಾ

ಉಳಿಸುವಿರಾ

ನನಗ್ಯಾಕೋ ಕಳೆದುಹೋಗುವ ಭಯ ಆವರಿಸುತ್ತಿದೆ. ನನ್ನ ಇರುವಿಕೆಯೇ ಕಾಣದಿರುವಾಗ ಮರೆಯಾದದ್ದು ಗೊತ್ತಾಗೋದು ಹೇಗೆ ? ಅನ್ನೋದು ನಿಮ್ಮ ಪ್ರಶ್ನೆಯಲ್ಲವೆ. ನಿಮ್ಮ ಕಣ್ಣ ಮುಂದಿನ ಅಥವಾ ದೂರದ ಯಾವುದೋ ಘಟನೆ ನಿಮ್ಮ ಪ್ರತಿಕ್ರಿಯೆಗಳೇ ನನ್ನ ಸಾವು ಮತ್ತು ಬದುಕನ್ನು ನಿರ್ಧರಿಸುತ್ತೆ.

ನಾನು ನಿಮ್ಮನ್ನು ಭೇಟಿಯಾಗಿದ್ದೇನೆ, ಮಾತನಾಡಿದ್ದೇನೆ, ಜೊತೆಗೆ ಹೆಜ್ಜೆ ಹಾಕಿದ್ದೇನೆ. ಆ ದಿನ ಸಂತೆಯಲ್ಲಿ ತರಕಾರಿ ಕೊಳ್ಳುವಾಗ ನಿಮ್ಮ ಮುಂದಿರುವ ಅಜ್ಜ ಎಡವಿದಾಗ ನೀವು ಎಬ್ಬಿಸಿದಿರಲ್ವಾ ಅಲ್ಲೇ ಪಕ್ಕದಲ್ಲಿದ್ದೆ. ನಿಮ್ಮೂರಿನ ಬಟ್ಟೆ ಮಳಿಗೆಗೆ ಬೆಂಕಿ ಬಿದ್ದಾಗ ಕೈ ಸುಟ್ಟರೂ ಒಂದಷ್ಟು ಜನರನ್ನು ಉಳಿಸಿದಿರಲ್ಲಾ ಅಲ್ಲಿ ನಿಂತಿದ್ದೆ. ಯಾವುದೋ ಗಾಡಿ ಗುದ್ದಿ ನಾಯಿಯೊಂದು ನರಳುತ್ತಿದ್ದಾಗ ಒಬ್ಬ ಶಾಲೆಯ ಹುಡುಗ ಅದನ್ನ ಆರೈಕೆ ಮಾಡಿದ್ನಲ್ಲ ಅದನ್ನು ನೋಡುತ್ತಿದ್ದೆ.

ನೀವು ಭಾಗವಹಿಸಿದ ಯಾವುದೋ ಸ್ಪರ್ಧೆಯಲ್ಲಿ ನಿಮ್ಮ ಎದುರಾಳಿ ಗೆದ್ದಾಗ ಓಡಿಹೋಗಿ ತಬ್ಬಿ ಅವನನ್ನು ಅಭಿನಂದಿಸಿದಾಗ ಅಲ್ಲೇ ಜೊತೆಗಿದ್ದೆ. ನಿಮ್ಮ ಮನೆಯ ಜವಾಬ್ದಾರಿಗೆ ಊರು ಬಿಟ್ಟು ಇನ್ನೆಲ್ಲೋ ದುಡಿಯುತ್ತಾ ಆಸೆಗಳನ್ನೆಲ್ಲಾ ಮೂಲೆಗೊತ್ತಿ ಗಂಜಿ ತಿಂದು ಮಲಗಿದಾಗ ನಿಮ್ಮ ಬಗಲಲ್ಲಿ ನಾನು ಮಲಗಿದ್ದೆ.

ಆದರೆ ಈಗ ಗೆದ್ದಾಗ ಸಂಭ್ರಮಿಸೋರಿಲ್ಲ, ಬಿದ್ದವರನ್ನು ಎಬ್ಬಿಸುವರಿಲ್ಲಾ, ಕಾಮವೇ ಪರಮಸುಖ ಆಗಿರುವಾಗ, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾದಾಗ ನಾ ಸ್ವಲ್ಪಸ್ವಲ್ಪವೇ ಕರಗುತ್ತಿದ್ದೇನೆ. ನೀವೊಮ್ಮೆ ದಯಮಾಡಿ ಗುರುತಿಸಿ ಉಳಿಸುವಿರಾ ? ನಿಮ್ಮ ಪ್ರಾಂಜಲ ಮನಸ್ಸಿನಿಂದ ರಸ್ತೆಬದಿಯಲ್ಲಿ, ಸಂತೆ ಮಧ್ಯದಲ್ಲಿ, ಅಂಗಡಿಯ ಮೂಲೆಯಲ್ಲಿ ,ನಿಮ್ಮ ಮನದ ಕೋಣೆಯಲ್ಲಿ, ಎದುರಿನವನ ಹೃದಯದಲಿ ಒರಗಿದ್ದೇನೆ. ತಟ್ಟಿ ಎಬ್ಬಿಸುವಿರಾ..🙏🏽

ಧೀರಜ್ ಬೆಳ್ಳಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *