LATEST NEWS
ದಿನಕ್ಕೊಂದು ಕಥೆ- ಕೈ ಜಾರಿದ ಕ್ಷಣ
ಕೈ ಜಾರಿದ ಕ್ಷಣ
ಅಮ್ಮನ ಕೈಹಿಡಿದಿದ್ದೆ. ಬಲವಾಗಿ ತುಂಬಾ ಬಲವಾಗಿ. ಯಾಕೆಂದರೆ ನಾವು ಸಾಗುತ್ತಿದ್ದುದು ಸಂತೆ ಮಧ್ಯದಲ್ಲಿ .ನನ್ನ ದೃಷ್ಟಿಗೆ ಹಲವಾರು ಕಾಲುಗಳ ವಿನಃ ಬೇರೇನೂ ಕಾಣುತ್ತಿಲ್ಲ. ಎಲ್ಲರ ನಡುವೆ ನುಗ್ಗುತ್ತಾ ಸಾಗಬೇಕು .ಬಿಗಿಹಿಡಿತಕ್ಕೆ ಬೆವೆತಿರುವ ಕೈಗಳು. ಆ ಕ್ಷಣ ತಪ್ಪಿತು. ಯಾರ್ಯಾರೋ ತಳ್ಳಿದರು.
ಕಿಲೋ ನಲುವತ್ತು, ಬನ್ನಿ ಅಣ್ಣ ,ಬನ್ನಿ ಅಕ್ಕ ,ಇದರ ನಡುವೆ ನಾನು ಮೌನ ಹೋರಾಟ ನಡೆಸುತಿದ್ದೆ. ನಾ ಅವರ ತಳ್ಳಿದೆನೋ, ನನ್ನ ಅವರು ತಳ್ಳಿದರೂ ಗೊತ್ತಿಲ್ಲ ಒಟ್ಟಿನಲ್ಲಿ ಮೂಲೆಗೆ ಸೇರಿದೆ. ಅಮ್ಮನನ್ನ ನಾನು ಹುಡುಕಲು ಸಾಧ್ಯವಿಲ್ಲ. ಅವರೇ ಬರುವರೆಂಬ ಭರವಸೆಯಲ್ಲಿ ಕಾದೆ.
ನಡೆದಾಡುವ ಕಾಲುಗಳು ನಿಧಾನವಾಗಿ ಕಡಿಮೆಯಾದ ಹಾಗೆ ಅಮ್ಮನ ಗೆಜ್ಜೆಯ ಧರಿಸಿದ ಪಾದಗಳು ನನ್ನ ಬಳಿ ಬಂದವು. ಮನೆಯಿಂದ ಹೊರಟಾಗ ಅಮ್ಮನ ಕಾಲು ಶುಭ್ರವಾಗಿತ್ತು. ಈಗ ಚಪ್ಪಲಿಯಿಲ್ಲದೆ ಕೊಳಕಾಗಿದೆ .ಪಾದಗಳು ಭಯದ ದುಃಖವನ್ನ ತೋರಿಸುತ್ತಿದ್ದವು .ಆ ಪಾದಗಳು ಹತ್ತಿರವಾದ ಹಾಗೆ ನನ್ನ ಕಣ್ಣಹನಿ ನಿಂತಿತು.
ಅವಳ ಅಪ್ಪುಗೆಯಲ್ಲಿ ಬದುಕಿಗೊಂದು ಜೀವ ಸಿಕ್ಕಿತು.” ಇನ್ಯಾವತ್ತೂ ಕೈ ಬಿಡಬೇಡ ಅಮ್ಮಾ” “ನೀನು ಕೂಡ ಪುಟ್ಟ ..”
ಕೋಲೂರಿಕೊಂಡು ನಮ್ಮ ಮುಂದೆ ರಸ್ತೆ ದಾಟುತ್ತಿದ್ದ ಅಜ್ಜಿ ವಿಶಾದದ ನಗೆ ನಕ್ಕು ಮುಂದುವರೆದಳು.
ಧೀರಜ್ ಬೆಳ್ಳಾರೆ