LATEST NEWS
ದಿನಕ್ಕೊಂದು ಕಥೆ- ಕಾಡು
ಕಾಡು
ರಾತ್ರಿಯ ನಿದ್ರೆ ಮುಗಿಸಿ ಮಂಜಾನೆ ತಿರುಗಾಟಕ್ಕೆ ಹೊರಟಿದ್ದ ಮೋಡಗಳನ್ನ ಕರೆದು ಮಳೆರಾಯ, ನೀರು ತುಂಬಿಸಿ ಒಂದಷ್ಟು ಊರುಗಳ ಪಟ್ಟಿ ನೀಡಿ ಹಂಚಲು ತಿಳಿಸಿದ . ಗಾಳಿ ಅವರನ್ನು ಹೊತ್ತೊಯ್ಯಲು ಸಿದ್ಧವಾಗಿತ್ತು .ಇಷ್ಟು ದಿನ ಕೆಲಸವನ್ನು ನೋಡಿ ತಿಳಿದಿದ್ದ ಮೋಡಗಳು ಮೊದಲಬಾರಿಗೆ ಕಾರ್ಯಕ್ಷೇತ್ರಕ್ಕೆ ಇಳಿದು ಸಂಭ್ರಮದಿಂದ ಹೊರಟವು.
ಊರಿನ ಅರಿವು ಗಾಳಿಗೆ ಗೊತ್ತಿತ್ತು ಹಾಗಾಗಿ ತಮ್ಮ ನಿಗದಿತ ಸ್ಥಳಗಳಿಂದ ನೀರನ್ನು ಹನಿಸುತ್ತ ಹನಿಸುತ್ತಾ ಹಸಿರಿರೋ ಕಡೆಗೆ ಹೆಚ್ಚು ಬೋಳಾದ ಕಡೆಗೆ ಸ್ವಲ್ಪ ಹನಿಗಳನ್ನು ಹನಿಸಿ ಮುಂದೆ ಸಾಗಿದವು.ಇಲ್ಲಿ ನೆಲದೊಳಗೆ ನೀರಿಗೆ ಕಾಯುತ್ತಾ ಮಲಗಿದ್ದ ಹಸಿರು, ನೀರು ನೆಲವನ್ನು ಮುಟ್ಟಿ ಒಳಗಿಳಿದು ಹಸಿರನ್ನು ಎಬ್ಬಿಸೋಕೆ ಮುಂಚೆ ಎದ್ದು ತಯಾರಾಗಿ ನೀರನ್ನು ಕುಡಿದು ಬೇರುಗಳನ್ನು ನೆಲದೊಳಕ್ಕೆ ಇಳಿಸಿ ಹಸಿರನ್ನು ಹೊರಕ್ಕೆ ಚಿಮ್ಮಿಲು ನೆಲದಿಂದ ಮೇಲೆದ್ದು ಧಾವಿಸಿ ನಿಧಾನವಾಗಿ ಬೆಳಗಿದವು.
ವರ್ಷದಲ್ಲಿ ಪ್ರತಿದಿನವೂ ಕಾಣುವ ಘಟನೆಯಲ್ಲ ಇದು. ಆಗಾಗ ಕಾಣಬಹುದಷ್ಟೇ. ಈ ಸೂಕ್ಷ್ಮ ವಿಚಾರ ನನ್ನೊಳಗಿಳಿಯಬೇಕಾದರೆ , ಸೂರ್ಯನ ಕಿರಣ ಭೂಮಿಯ ಮುಟ್ಟುವಾಗ ನುಡಿಯುವ ಮಾತು, ಗಿಡದ ಮೇಲಿನ ಮಂಜಿನಹನಿ ನೆಲವನ್ನು ಸ್ಪರ್ಶಿಸುವಾಗ ಪಿಸುಗುಡುವ ನುಡಿ ನನ್ನೆದೆಗೆ ದಾಟಿದರೆ ಮಾತ್ರ ಮತ್ತೆ ಮೋಡಗಳು ನೀರನ್ನು ತುಂಬಿಸಿಕೊಂಡು ಮನೆಯಂಗಳಕ್ಕೆ ಸುರಿದಾವು .ಇಲ್ಲವಾದರೆ ಖಾಲಿ ಮೋಡವಾಗಿ ಇಲ್ಲೇ ಅಡ್ಡಾಡುತ್ತಿರುತ್ತಾವೆ ಆಯ್ಕೆ ನನಗೆ ಬಿಟ್ಟಿದ್ದು.
ಧೀರಜ್ ಬೆಳ್ಳಾರೆ