LATEST NEWS
ದಿನಕ್ಕೊಂದು ಕಥೆ- ಬದುಕಿ- ಮನೋರಂಜನೆ
ಬದುಕಿ- ಮನೋರಂಜನೆ
ನೀವು ಬೆಳ್ಳಾರೆಯಿಂದ ಎರಡು ಕಿಲೋಮೀಟರ್ ಮುಂದೆ ಪಂಜ ಮಾರ್ಗದಲ್ಲಿ ಸಾಗುವಾಗ ಅಲ್ಲೊಂದು ಇಳಿಜಾರಿನಲ್ಲಿ ಎಡಬದಿಗೆ ಆಲದ ಮರದ ಬದಿಯಲ್ಲಿ ಸಣ್ಣ ಒಳದಾರಿ ಸಾಗುತ್ತದೆ. ಅಲ್ಲಿ ನಡೆದು ಸೇತುವೆಯ ಇನ್ನೊಂದು ತುದಿ ತಲುಪಿದಾಗ ಎರಡು ಗದ್ದೆಗಳಾಚೆ ನಮ್ಮೂರಿನ ಜಾತ್ರೆಯಾಗುವ ಗುತ್ತಿನ ಮನೆ ಕಾಣುತ್ತದೆ.
ಅದು ಬೀಳುವ ಸ್ಥಿತಿಯಲ್ಲಿದೆ. ಯಾಕೆಂದರೆ ಊರು ಬದಲಾಗಿದೆ .ಎಲ್ಲಾ ಮನೆಗಳಲ್ಲಿ ಟಿವಿ, ಫ್ರಿಡ್ಜು ಗಳು ಇದ್ದಾವೆ. ಇದ್ಯಾವುದನ್ನು ಬಳಸುವ ಚೈತನ್ಯ ಶಕ್ತಿ ಹಿರಿಯ ಜೀವಗಳಲ್ಲಿ ಇಲ್ಲ. ಗೋಡೆಗಳ ನಡುವೆ ಅದೇ ಗದ್ದೆ ತೋಟಗಳನ್ನು ನೋಡಿಕೊಳ್ಳುತ್ತಾ ದಿನದೂಡುತ್ತಿದ್ದಾರೆ. ವರ್ಷಕೊಮ್ಮೆ ಊರ ಜಾತ್ರೆಗೆ ಊರಿನ ಆಚಾರದ ಪ್ರಕಾರ ಕಾಂಕ್ರೀಟು ಕಾಡುಗಳಿಂದ ಕಾರು ಬೈಕು ದೊಡ್ಡದೊಡ್ಡ ಗಾಡಿಗಳಲ್ಲಿ ಬಂದಿಳಿಯುತ್ತಾರೆ ಕುಟುಂಬ ಸಮೇತರಾಗಿ.
ಜೊತೆಗೆ ಅವರ ಗೆಳೆಯರ ಬಳಗ ಕೂಡ .ಊರಿನ ಜಾತ್ರೆಯಲ್ಲಿ ಜನ ಓಡಾಡುತ್ತಾರೆ. ಕಾಲಿಡಲು ಜಾಗವಿರದಷ್ಟು ತುಂಬಿಕೊಳ್ಳುತ್ತದೆ. ಇಡೀ ಊರು ಆ ದಿನ ತನ್ನವರನ್ನು ನೋಡುತ್ತದೆ. ಅಲ್ಲಿ ಬಂದ ನಗರೀಕರಿಗೆ ಜಾತ್ರೆ ಒಂದು ಮನೋರಂಜನೆ, ಸೆಲ್ಫಿ, ಕಿರುಚಾಟ, ಮೋಜು-ಮಸ್ತಿ. ಊರಿನಲ್ಲೇ ವಾಸಿಸುವ ಬಿಳಿಕೂದಲಿನ ಹಿರಿಯರಿಗೆ ಅದವೇ ಬದುಕು. ಅಲ್ಲೊಂದಷ್ಟು ವಿಧಿ ವಿದಾನಗಳು, ನಂಬಿಕೆಯ ಕೈ ಮುಗಿದರೆ ಕಿರಿಯ ಕೈಗಳು ಮೊಬೈಲ್ ಒಳಗೆ ಮುಳುಗಿದ್ದಾವೆ.
ಮರುದಿನ ಗಾಡಿ ಹೊರಡುತ್ತದೆ. ಊರು ಖಾಲಿಯಾಗುತ್ತದೆ .ಗುತ್ತಿನ ಮನೆ ಮುಂದೆ ಮುರಿದ ತುತ್ತೂರಿಗಳು ಐಸ್ ಕ್ರೀಮಿನ ಕಡ್ಡಿಗಳು, ಆಟಿಕೆ ಸಾಮಾನುಗಳು ,ಬಲೂನುಗಳು ಪ್ಲಾಸ್ಟಿಕ್ ಚೀಲಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ .ಅಜ್ಜಿಯಂದಿರು ಪೊರಕೆ ಹಿಡಿದು ಅದನ್ನು ಗುಡಿಸುತ್ತಿರುವಾಗ ಯುವ ಮನಸ್ಸುಗಳು ದೊಡ್ಡದೊಂದು ಕೋಣೆಯ ಒಳಗೆ ಕುಳಿತು ಕಂಪ್ಯೂಟರ್ ಒತ್ತುತ್ತಿರುತ್ತಾರೆ. ಬದುಕು ಮತ್ತು ಮನೋರಂಜನೆ ನಡುವೆ ಮೂರು ಉಸಿರಾಡುತ್ತಿದೆ. ಮಣ್ಣು ಬಯಸುತ್ತಿದೆ ತನ್ನ ಮಕ್ಕಳ ಪಾದಸ್ಪರ್ಶ ವನ್ನು ………
ಧೀರಜ್ ಬೆಳ್ಳಾರೆ