LATEST NEWS
ದಿನಕ್ಕೊಂದು ಕಥೆ- ಪ್ರಶ್ನೆ?

ಪ್ರಶ್ನೆ?
ಪುಟ್ಟ ಪಾದದಲ್ಲಿ ಕಿರುಗೆಜ್ಜೆ ಧರಿಸಿ ಮನೆಯಲ್ಲಿ ಓಡಾಡುವವಳೇ ನನ್ನ ಮುದ್ದಿನ ತಂಗಿ ಭಕ್ತಿ. ಹೆಸರಿಗೆ ಅನ್ವರ್ಥದ ಹಾಗೆಯೇ ಎಲ್ಲದರಲ್ಲೂ ಭಕ್ತಿ ತುಸು ಹೆಚ್ಚೇ ಇದೆ. ಮುದ್ದಿನ ಕಣ್ಣೋಟ,ತೊದಲು ಮಾತಿನಿಂದ ಮನಸೆಳೆಯುವ ದೇವತೆ ಅವಳು. ಕೂಡು ಕುಟುಂಬದ ಜೊತೆಗೂಡಿ ಬದುಕುವ ಇರಾದೆ ಅವಳದು. ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ.
ಮಾತಿಗೆ ಎದುರಾಡದೆ ಒಪ್ಪಿ ನಡೆವ ಮನಮೆಚ್ಚಿದ ಕುವರಿ ಅವಳು .ಇತ್ತೀಚಿಗೆ ಅವಳ ಹಲವು ಪ್ರಶ್ನೆಗಳು ನನ್ನನ್ನು ವಿಪರೀತ ಯೋಚನೆಗೆ ಹಚ್ಚುತ್ತಿವೆ. “ಅಣ್ಣಾ ನಾವ್ಯಾಕೆ ದಿನವೂ ದೇವರಲ್ಲಿ ಕೈ ಮುಗಿದು ಬೇಡಬೇಕು?, ನನಗೆ ಅದು ನೀಡು, ನನಗೆ ಇದು ನೀಡು, ನನಗೆ ಇದನ್ನೆಲ್ಲಾ ಮಾಡ್ತೇನೆ, ಅಂತೆಲ್ಲ ಪಟ್ಟಿಗಳನ್ನು ಯಾಕೆ ಸಲ್ಲಿಸಬೇಕು? ದೇವರಿಗೆ ಅದೆಲ್ಲ ಗೊತ್ತಿಲ್ವಾ? ನಮ್ಮನ್ನು ಭೂಮಿಗೆ ಕಳುಹಿಸಿದ ಮೇಲೆ ನಮಗೇನು ನೀಡಬೇಕು, ಏನು ನೀಡಬಾರದು ಅಂತ ಆ ದೇವ್ರಿಗೆ ಗೊತ್ತಿಲ್ವಾ?.

ಅಲ್ಲಾ ಪ್ರಾರ್ಥಿಸಿದರೆ ಮಾತ್ರ ನೀಡಬೇಕು ಅಂತೇನಾದ್ರೂ ದೇವರು ನಿರ್ಧರಿಸಿರುತ್ತಾರಾ? ಮನೇಲಿ ಅಮ್ಮ ನಾವು ಕೇಳಿದ ಮೇಲೆಯೇ ನಮಗೆ ಅಗತ್ಯವಾದದ್ದನ್ನು ನೀಡುವುದಾ, ಅಲ್ವಲ್ಲಾ?. ಹಾಗೆಯೇ ದೇವರು ಅಮ್ಮನ ತರಹ ತಾನೇ. ನಾವು ಕೈಮುಗಿದು ದೇವರೇ ನೀವು ನನಗೆ ನೀಡಬೇಕಾದನ್ನ ನೀಡಿ ,ನನ್ನಿಂದ ಪಡೆಯಬೇಕಾದದ್ದನ್ನ ಪಡೆದುಕೋ ಅಂತ ಬೇಡಿದ್ರೆ ಆಗೋದಿಲ್ವಾ ?….
ಪ್ರಶ್ನೆಗೆ ಉತ್ತರವಿಲ್ಲದೆ ನಿಂತೆ .ಬಿಗಿಯಾಗಿ ಅಪ್ಪಿಕೊಂಡು ಅವಳ ಕಣ್ಣನ್ನು ಗಮನಿಸಿದೆ. ಮುಗ್ಧ ಪ್ರಶ್ನೆಗಳು ಇನ್ನೂ ಹಲವು ಅಲ್ಲಡಗಿದೆ. ನನ್ನ ಯೋಚನೆಗೆ ಇದು ಯಾಕೆ ಬರ್ಲಿಲ್ಲ. ಇದರೊಳಗೆ ಇನ್ನು ಗುಡಾರ್ಥವಿರಬಹುದಾ? ಅದು ಸಂವಾದದಿಂದ ಹೊರಬರಬಹುದಾ? ಪ್ರಶ್ನೆಗಳನ್ನು ಹೊತ್ತಿದ್ದೇನೆ .ಉತ್ತರವಿಲ್ಲದೆ. ಅವಳೊಂದಿಗೆ ಮತ್ತೆ ಮಾತು ಮುಂದುವರೆಸಲು ನಿಮ್ಮ ಉತ್ತರಕ್ಕಾಗಿ ಕಾಯ್ತಾ ಇದ್ದೇನೆ ….
ಧೀರಜ್ ಬೆಳ್ಳಾರೆ