LATEST NEWS
ಅಸ್ಸಾಂ: ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು; ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಉದ್ರಿಕ್ತರು
ನಾಗಾಂವ್, ಮೇ 22: ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಉದ್ರಿಕ್ತರ ಗುಂಪೊಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆ ಅಸ್ಸಾಂನ ನಾಗಾಂವ್ ಜಿಲ್ಲೆಯ ಬಟಾದ್ರವ ಎಂಬಲ್ಲಿ ಶನಿವಾರ ನಡೆದಿದೆ.
ಈ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನಾಗಾಂವ್ ಎಸ್‌ಪಿ ಲೀನಾ ಡೋಲೆ ತಿಳಿಸಿದ್ದಾರೆ. ಮೀನು ವ್ಯಾಪಾರಿಯೊಬ್ಬರು ಶುಕ್ರವಾರ ರಾತ್ರಿ ಶಿವಸಾಗರ್ ಎಂಬಲ್ಲಿಗೆ ತೆರಳುತ್ತಿದ್ದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಕಾರಣಕ್ಕೆ ನಿಟ್ಟಿನಿಂದ ಠಾಣೆಗೆ ಬೆಂಕಿ ಹಚ್ಚಿದೆ ಎನ್ನಲಾಗಿದೆ. ಎರಡು ದ್ವಿಚಕ್ರ ವಾಹನಗಳನ್ನೂ ಗುಂಪು ಸುಟ್ಟುಹಾಕಿದ್ದು, ಪೊಲೀಸರು ಮೀನು ವ್ಯಾಪಾರಿಯನ್ನು ವಶಕ್ಕೆ ಪಡೆದಿದ್ದು ಯಾಕೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಬಂಧಿತರನ್ನು ಬಿಡಿಸಿಕೊಂಡು ಬರಲೆಂದು ಪೊಲೀಸ್ ಠಾಣೆಗೆ ತೆರಳಿದ್ದಾಗ ಪೊಲೀಸರು ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶನಿವಾರ ಬೆಳಿಗ್ಗೆ ಬಂಧಿತ ವ್ಯಕ್ತಿಯ ಪತ್ನಿ ಹಣ ತೆಗೆದುಕೊಂಡು ಠಾಣೆಗೆ ಹೋಗಿದ್ದರು. ಆದರೆ, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ದೊರೆಯಿತು. ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದು ತಿಳಿಯಿತು ಎಂದು ವ್ಯಾಪಾರಿಯ ಕುಟುಂಬದವರು ಆರೋಪಿಸಿದ್ದಾರೆ.
ಪೊಲೀಸರು ಹಲ್ಲೆ ಮಾಡಿ, ಚಿತ್ರಹಿಂಸೆ ನೀಡಿದ್ದರಿಂದಲೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಎಲ್ಲಾ ಆಯಾಮಗಳಿಂದಲೂ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದು ಲೀನಾ ಡೋಲೆ ಹೇಳಿದ್ದಾರೆ.