Connect with us

    LATEST NEWS

    ಶಿಕ್ಷಕನ ಹೊಡತಕ್ಕೆ ಮೃತಪಟ್ಟ ದಲಿತ ವಿದ್ಯಾರ್ಥಿ: ಕಾಂಗ್ರೆಸ್‌ ಶಾಸಕ ರಾಜೀನಾಮೆ

    ಜೈಪುರ, ಆಗಸ್ಟ್ 16: ದಲಿತ ವಿದ್ಯಾರ್ಥಿಯೊಬ್ಬ ಶಾಲಾ ಶಿಕ್ಷಕರ ಥಳಿತಕ್ಕೊಳಗಾಗಿ ಮೃತಪಟ್ಟ ಘಟನೆಯಿಂದ ಮನನೊಂದಿರುವ ಕಾಂಗ್ರೆಸ್‌ ಶಾಸಕ ಪಾನ್‌ ಚಂದ್‌ ಮೇಘವಾಲ್‌ ಎಂಬುವವರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

    ರಾಜೀನಾಮೆ ಪತ್ರವನ್ನು ಅವರು ಮುಖ್ಯಮಂತ್ರಿ ಮತ್ತು ವಿಧಾನಸಭೆ ಸ್ಪೀಕರ್‌ ಸಿ.ಪಿ ಜೋಶಿ ಅವರಿಗೆ ರವಾನಿಸಿದ್ದಾರೆ. ದಲಿತ ವಿದ್ಯಾರ್ಥಿಯ ಸಾವಿನಿಂದ ನೋವಾಗಿದೆ ಎಂದು ಮೇಘವಾಲ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಸಂತ್ರಸ್ತ ಕುಟುಂಬಕ್ಕೆ ₹50 ಲಕ್ಷ ಆರ್ಥಿಕ ನೆರವು ಮತ್ತು ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವಂತೆ ನಾನು ಒತ್ತಾಯಿಸಿದ್ದೇನೆ. 24 ಗಂಟೆ ಕಳೆದರೂ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದರಿಂದ ರಾಜೀನಾಮೆ ನೀಡಿರುವುದಾಗಿ ಶಾಸಕ ಮೇಘವಾಲ್‌ ಹೇಳಿದ್ದಾರೆ.

    ಬರನ್-ಅತ್ರು ವಿಧಾನಸಭಾ ಕ್ಷೇತ್ರದ ಎರಡು ಬಾರಿಯ ಶಾಸಕ ಪಾನ್‌ಚಂದ್‌ ಮೇಘವಾಲ್ ಕಾಂಗ್ರೆಸ್ ಚಿಹ್ನೆಯಡಿ ಚುನಾವಣೆ ಗೆದ್ದಿದ್ದರು. ದೇಶವು ಸ್ವಾತಂತ್ರ್ಯ ಪಡೆದು 75 ವರ್ಷ ಪೂರೈಸಿದೆ. ಅಮೃತ ಮಹೋತ್ಸವ ಆಚರಿಸಿದೆ. ಆದರೆ ಇಷ್ಟು ವರ್ಷಗಳ ನಂತರವೂ ರಾಜ್ಯದಲ್ಲಿ ದೀನದಲಿತ ಮತ್ತು ಶೋಷಿತ ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ತನಗೆ ತೀವ್ರ ನೋವುಂಟು ಮಾಡಿವೆ. ಇಂದು ನನ್ನ ಸಮಾಜ ಅನುಭವಿಸುತ್ತಿರುವ ಹಿಂಸೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಮೇಘವಾಲ್‌ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ‘ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದಲಿತರಿಗೆ ಒದಗಿಸಿದ ಸಮಾನತೆಯ ಹಕ್ಕನ್ನು ರಕ್ಷಿಸಲು ಯಾರೂ ಇಲ್ಲ ಎಂದು ತೋರುತ್ತದೆ. ದಲಿತರ ಮೇಲಿನ ದೌರ್ಜನ್ಯದ ಹೆಚ್ಚಿನ ಪ್ರಕರಣಗಳಲ್ಲಿ ಎಫ್‌ಆರ್ ಸಲ್ಲಿಸುತ್ತದೆ. ವಿಧಾನಸಭೆಯಲ್ಲಿ ಹಲವು ಬಾರಿ ವಿಷಯ ಮಂಡಿಸಿದರೂ ಪೊಲೀಸ್ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ‘ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ‘ನಮ್ಮ ಸಮಾಜದ ಹಕ್ಕುಗಳನ್ನು ರಕ್ಷಿಸಲು ನಾವು ವಿಫಲರಾದಾಗ ಅಧಿಕಾರದಲ್ಲಿವುದರಲ್ಲಿ ಯಾವುದೇ  ಅರ್ಥವಿಲ್ಲ. ನನ್ನ ಆತ್ಮಸಾಕ್ಷಿಯಂತೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಯಾವುದೇ ಹುದ್ದೆಗಳ ಹಂಗಿಲ್ಲದೇ  ಸಮಾಜದ ಶೋಷಿತ ವರ್ಗದ ಪರವಾಗಿ ಹೋರಾಡುವ ಸಲುವಾಗಿ ನನ್ನ ರಾಜೀನಾಮೆಯನ್ನು ಅಂಗೀಕರಿಸಿ’ ಎಂದು ಮೇಘವಾಲ್ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

    ಕುಡಿಯುವ ನೀರಿನ ಮಡಕೆ ಮುಟ್ಟಿದ ಎನ್ನುವ ಕಾರಣಕ್ಕಾಗಿ ಖಾಸಗಿ ಶಾಲಾ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್‌ನನ್ನು ಹೊಡೆದಿದ್ದರು. ಈ ಬಾಲಕ ಕಳೆದ ಶನಿವಾರ ಮೃತಪಟ್ಟಿದ್ದ. ಜುಲೈ 20ರಂದು ಬಾಲಕನ ಮೇಲೆ ಹಲ್ಲೆ ನಡೆದಿತ್ತು. ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹5 ಲಕ್ಷ ಪರಿಹಾರ ಘೋಷಿಸಲಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply