DAKSHINA KANNADA
ರಾಜಕಾಲುವೆ ಒತ್ತುವರಿ ತೆರವು ಒಕೆ, ನದಿಯನ್ನೇ ನುಂಗಿದ ಕಟ್ಟಡದ ತೆರವಿಲ್ಲ ಯಾಕೆ ?

ರಾಜಕಾಲುವೆ ಒತ್ತುವರಿ ತೆರವು ಒಕೆ, ನದಿಯನ್ನೇ ನುಂಗಿದ ಕಟ್ಟಡದ ತೆರವಿಲ್ಲ ಯಾಕೆ ?
ಪುತ್ತೂರು, ಮೇ 31: ಮೇ 29 ರಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿದ ಮಳೆ ಇಡೀ ಜಿಲ್ಲೆಯ ಜನರ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ.
ಮಂಗಳೂರು ನಗರ ಮಳೆಗೆ ಸಂಪೂರ್ಣ ಮುಳುಗಡೆಯಾದರೆ, ಜಿಲ್ಲೆಯ ಹಲವಡೆಗಳಲ್ಲಿ ಚರಂಡಿಯಲ್ಲಿ ಹರಿಯುವ ನೀರು ಮನೆಯೊಳಗೆ ಹರಿದಿದೆ.

ಜಿಲ್ಲೆಯಲ್ಲಿ ಈ ರೀತಿಯ ನೀರಿನಾವತಾರಕ್ಕೆ ಒಂದಡೆ ನಿರಂತರವಾಗಿ ಸುರಿದ ಕುಂಭದ್ರೋಣ ಮಳೆ ಕಾರಣವಾದರೆ, ಇನ್ನೊಂದೆಡೆ ನೀರು ಹರಿಯಲು ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದೇ ಕಾರಣವಾಗಿದೆ.
ಈ ಹಿನ್ನಲೆಯಲ್ಲಿ ಇದೀಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಎಲ್ಲಾ ರಾಜಕಾಲುವೆ, ತೊರೆ, ಹಳ್ಳಗಳ ಒತ್ತುವರಿಯನ್ನು ತೆರವುಗೊಳಿಸಲು ನಿರ್ಧರಿಸಿದೆ.
ಈ ಎಲ್ಲಾ ತೊರೆ, ಹಳ್ಳಗಳ ನೀರುಗಳು ಜಿಲ್ಲೆಯ ಪ್ರಮುಖ ಜೀವನದಿಯಾದ ನೇತ್ರಾವತಿ ನದಿಯನ್ನೇ ಹೆಚ್ಚಾಗಿ ಸೇರುತ್ತಿದೆ.
ಆದರೆ ಈ ನದಿಯನ್ನೇ ಇಂದು ಒತ್ತುವರಿ ಮಾಡಿಕೊಂಡು ನದಿಯ ಮೇಲೆಯೇ ಕಟ್ಟಡಗಳನ್ನು ಕಟ್ಟಲಾಗುತ್ತಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕುಟೇಲು ಸೇತುವೆ ಬಳಿಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡದ ಒಂದಂಶ ನೇತ್ರಾವತಿ ನದಿಯಲ್ಲೇ ನಿರ್ಮಾಣಗೊಂಡಿದೆ.
ನದಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣಗೊಂಡಿರುವ ಈ ಕಟ್ಟಡದ ಭಾಗವನ್ನು ತೆರವುಗೊಳಿಸಬೇಕೆಂದು ಪುತ್ತೂರು ಸಹಾಯಕ ಕಮಿಷನರ್ ಕಟ್ಟಡ ಮಾಲಿಕನಿಗೆ ನೋಟೀಸ್ ಜಾರಿ ಮಾಡಿ ವರ್ಷಗಳೇ ಕಳೆದಿದೆ.
ಅಲ್ಲದೆ ಸ್ಥಳೀಯ ಉಪ್ಪಿನಂಗಡಿ ಗ್ರಾಮಪಂಚಾಯತ್ ಗೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನೂ ನೀಡಲಾಗಿದೆ.
ಆದರೆ ಈ ವರೆಗೆ ಈ ಕಟ್ಟಡವನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದಿಲ್ಲ.
ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ರಾಜ ಕಾಲುವೆ, ತೊರೆ, ತೋಡುಗಳ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಲು ಕಾರ್ಯಕ್ರಮ ಉತ್ತಮ ನಡೆಯಾಗಿದೆ.
ಅದರ ಜೊತೆಗೆ ಇಂಥಹ ನದಿಯನ್ನೇ ನುಂಗಿದ ಕುಳಗಳ ವಿರುದ್ಧವೂ ಕಾರ್ಯಾಚರಣೆ ನಡೆಯಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.