Connect with us

    DAKSHINA KANNADA

    ಕೊರೊನಾ ವಾರಿಯರ್ಸ್ ಗಳಲ್ಲೇ ಹೆಚ್ಚುತ್ತಿದೆ ಪಾಸಿಟೀವ್ !!!

    ಪುತ್ತೂರು ಜೂನ್ 30: ಮಹಾಮಾರಿ ಕೊರೊನಾ ಇದೀಗ ರೋಗದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೊರೊನಾ ವಾರಿಯರ್ಸ್ ರಲ್ಲೂ ಭೀತಿ ಮೂಡಿಸಿದೆ. ಕೊರೊನಾ ವಾರಿಯರ್ಸ್ ಆಗಿರುವ ಪೌರ ಕಾರ್ಮಿಕರಲ್ಲಿ ಇದೀಗ ಕೊರೊನಾ ಭೀತಿ ಮನೆ ಮಾಡಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯ ಪೌರ ಕಾರ್ಮಿಕರೊಬ್ಬರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾದ ಹಿನ್ನಲೆಯಲ್ಲಿ ನಗರಸಭೆಯ ಎಲ್ಲಾ ಪೌರ ಕಾರ್ಮಿಕರು ಇದೀಗ ತವರಿಗೆ ಹೊರಡಲು ಅಣಿಯಾಗಿದ್ದಾರೆ.

    ಮಹಾಮಾರಿ ಕೊರೊನಾ ಬಡವನಿಂದ ಬಲ್ಲಿದನ ತನಕ ಯಾರನ್ನೂ ಬಿಟ್ಟಿಲ್ಲ. ಕೊರೊನಾ ಮಹಾಮಾರಿಯ ವಿರುದ್ಧ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು, ಪೋಲೀಸರು, ಪೌರ ಕಾರ್ಮಿಕರನ್ನೂ ಇದೀಗ ಈ ಮಾರಿ ಆವರಿಸಿಕೊಂಡಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಇಂಥಹುದೇ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೊರೊನಾ ವಾರಿಯರ್ಸ್ ಆಗಿ ಗುರುತಿಸಿಕೊಂಡಿರುವ ವೈದ್ಯರು, ದಾದಿಯರು, ಪೋಲೀಸ್ ಹಾಗೂ ಪೌರ ಕಾರ್ಮಿಕರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿರುವುದು ಆತಂಕಕ್ಕೂ ಕಾರಣವಾಗಿದೆ.


    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರಕಾರಿ ಮಾಹಿತಿ ಪ್ರಕಾರ ಒಟ್ಟು 50 ಕ್ಕೂ ಮಿಕ್ಕಿದ ವೈದ್ಯರು ಹಾಗೂ ದಾದಿಯರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿದ್ದರೆ, 10 ಕ್ಕೂ ಮಿಕ್ಕಿದ ಪೋಲೀಸರಲ್ಲಿ ಪಾಸಿಟೀವ್ ಪತ್ತೆಯಾಗಿದೆ. ಅದೇ ರೀತಿ ಇದೀಗ ಪುತ್ತೂರು ನಗರಸಭೆಯ ಪೌರ ಕಾರ್ಮಿಕನಲ್ಲೂ ಕೊರೊನಾ ಪಾಸಿಟೀವ್ ಪತ್ತೆಯಾಗಿದ್ದು, ಇದರಿಂದಾಗಿ ಪೌರ ಕಾರ್ಮಿಕ ವರ್ಗ ಇದೀಗ ಭಯಭೀತವಾಗಿದೆ.


    ಪುತ್ತೂರು ನಗರಸಭೆಯಲ್ಲಿ ಸುಮಾರು 41 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಇವರೆಲ್ಲಾ ಇದೀಗ ಕೆಲಸ ಬಿಟ್ಟು, ತಮ್ಮ ತಮ್ಮ ಊರಿಗೆ ತೆರಳಲು ಸಿದ್ಧತೆಯನ್ನು ನಡೆಸಿದ್ದಾರೆ. ಆದರೆ ಈ ಕಾರ್ಮಿಕರಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ಸ್ಥಳೀಯ ಶಾಸಕ ಸಂಜೀವ ಮಠಂದೂರು ನೀಡಿದ ಹಿನ್ನಲೆಯಲ್ಲಿ ಇದೀಗ ಸದ್ಯಕ್ಕೆ ಪೌರ ಕಾರ್ಮಿಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇತ್ತೀಚಿನ ಕೆಲವು ದಿನಗಳಿಂದ ಕೊರೊನಾ ಪಾಸಿಟೀವ್ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಜನರ ಆತಂಕಕ್ಕೂ ಕಾರಣವಾಗಿದೆ. ಜಿಲ್ಲೆಯಲ್ಲಿ ಒಟ್ಟು 741 ಪಾಸಿಟೀವ್ ಪ್ರಕರಣಗಳು ದಾಖಲಾಗಿದ್ದು, ಪಾಸಿಟೀವ್ ವ್ಯಕ್ತಿಗಳ ಸಂಪರ್ಕವಿಲ್ಲದವರಲ್ಲೂ ಕೊರೊನಾ ಪಾಸಿಟೀವ್ ಪತ್ತೆಯಾಗಿರುವುದು ಈ ಆತಂಕಕ್ಕೆ ಕಾರಣವೂ ಆಗಿದೆ. ಈ ಹಿನ್ನಲೆಯಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಲ್ಲೇ ಇದೀಗ ಭಯದ ವಾತಾವರಣ ನಿರ್ಮಾಣಗೊಂಡಿರುವುದು ಜನಸಾಮಾನ್ಯನ ಭಯವನ್ನು ಇನ್ನಷ್ಟು ಹೆಚ್ಚಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply