LATEST NEWS
ಕೇರಳದಿಂದ ಜಿಲ್ಲೆಗೆ ಆಗಮಿಸುವವರಿಗೆ ಫೆಬ್ರವರಿ 22 ರಿಂದ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ…!!
ಮಂಗಳೂರು ಫೆಬ್ರವರಿ 18: ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಕಾರಣಗಳಿಗೆ ಕಾಸರಗೋಡು ಗಡಿಭಾಗದಿಂದ ದ.ಕ.ಜಿಲ್ಲೆ ಪ್ರವೇಶಿಸುವವರು ಫೆ.22 ರಿಂದ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ದ.ಕ.ಜಿಲ್ಲೆ ಪ್ರವೇಶಿಸುವ ಎಲ್ಲಾ ಕೇರಳ ರಾಜ್ಯದವರು 72 ಗಂಟೆಗಳೊಳಗಿನ ಆರ್ಟಿಪಿಸಿಆರ್ ವರದಿ ಕಡ್ಡಾಯವಾಗಿ ಹೊಂದಿರಬೇಕು. ಈ ವರದಿ ಇಲ್ಲದವರಿಗೆ ಗಡಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಆದರೆ ತುರ್ತುಚಿಕಿತ್ಸೆ ನಿಮಿತ್ತ ಆ್ಯಂಬುಲೆನ್ಸ್ ಮೂಲಕ ಬರುವ ರೋಗಿಗಳು ಹಾಗೂ ಅವರ ಮನೆಯವರಿಗೆ ಗಡಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಅವರು ಆಯಾ ಆಸ್ಪತ್ರೆಗಳಲ್ಲಿ ಕೊರೊನಾ ತಪಾಸಣೆ ಮಾಡುವುದು ಕಡ್ಡಾಯ ಎಂದು ತಿಳಿಸಿದರು.
ಕೇರಳ ರಾಜ್ಯದಿಂದ ಉದ್ಯೋಗ, ಶಾಲಾ-ಕಾಲೇಜುಗಳಿಗೆಂದು ಬರುವವರು ಪ್ರತಿ 15 ದಿನಗಳಿಗೊಮ್ಮೆ ಆರ್ಟಿಪಿಸಿಆರ್ ತಪಾಸಣೆ ಕಡ್ಡಾಯವಾಗಿ ನಡೆಸಬೇಕು. ಅಲ್ಲದೆ ಶಾಲಾ-ಕಾಲೇಜು, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ನಿತ್ಯ ಗಡಿ ಮೂಲಕ ಸಂಚಾರ ಮಾಡುವ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಆರೋಗ್ಯ ಇಲಾಖೆಗೆ ನೀಡಬೇಕು. ಅಲ್ಲದೆ ಕೇರಳದಿಂದ ಬಂದು ದ.ಕ.ಜಿಲ್ಲೆಯ ಲಾಡ್ಜ್ಗಳಲ್ಲಿ ತಂಗುವವರೂ 72 ಗಂಟೆಗಳೊಳಗಿನ ಆರ್ಟಿಪಿಸಿಆರ್ ವರದಿ ನೀಡಿ ಕೊಠಡಿ ಪಡೆಯಬೇಕು.