KARNATAKA
ಕೂಲ್ IPS ಅಧಿಕಾರಿ ಪ್ರತಾಪ್ ರೆಡ್ಡಿ ರಾಜಿನಾಮೆ, ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ ರವಾನೆ..!
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನಿವೃತ್ತಿಗೆ ಎರಡು ತಿಂಗಳು ಇರುವಾಗ ಹಿರಿಯ ಅಧಿಕಾರಿ DGP ಪ್ರತಾಪ್ ರೆಡ್ಡಿ ರಾಜೀನಾಮೆ ನೀಡಿ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದಾರೆ.
ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪ್ರತಾಪ್ ರೆಡ್ಡಿ ವೈಯುಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಪ್ರತಾಪ್ ರೆಡ್ಡಿ ಅವರು 1991ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದಾರೆ. ಕರ್ನಾಟಕದಲ್ಲಿ ಹಾಸನ ಜಿಲ್ಲೆಯಲ್ಲಿ ಎಎಸ್‌ಪಿ ಕರ್ತವ್ಯ ಆರಂಭಿಸಿದ್ದ ಪ್ರತಾಪ್ ರೆಡ್ಡಿ ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಪಿಯಾಗಿ, ಪಶ್ಚಿಮ ವಲಯ IGP ಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಿಐಡಿ ವಿಭಾಗದಲ್ಲಿ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿದ್ದಾರೆ. ಸಿಬಿಐ ಯಲ್ಲೂ ಸೇವೆ ಸಲ್ಲಿಸಿರುವ ಭ್ರಷ್ಟಾಚಾರ ನಿಗ್ರಹ ದಳದ ಮುಂಬೈ ಮತ್ತು ಬೆಂಗಳೂರು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಬ್ಯಾಂಕಿಂಗ್ ಮತ್ತು ಸೈಬರ್ ಸೆಕ್ಯುರಿಟಿ ವಿಭಾಗದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಪ್ರತಾಪ್ ರೆಡ್ಡಿ ಅವರನ್ನು ಕಮಲ್ ಪಂತ್ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿತ್ತು. ರಾಜ್ಯದ ಕೂಲ್ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾದ ಪ್ರತಾಪ್ ರೆಡ್ಡಿ ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿ ಪದಕ ಕೂಡ ಪಡೆದಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವುದರಲ್ಲಿ ಅಪಾರ ಅನುಭವ ಪಡೆದಿರುವ ನುರಿತ ಪೊಲೀಸ್ ಅಧಿಕಾರಿ ಎಂದು ಪ್ರತಾಪ್ ರೆಡ್ಡಿ ಅವರು ಹೆಸರುಗಳಿಸಿದ್ದಾರೆ. ಮೊರೊಕ್ಕೋ ದಲ್ಲಿ ಬಂಧಿಸಲ್ಪ ಭೂಗತ ಪಾತಕಿ ಬನ್ನಂಜೆ ರಾಜನನ್ನು ಭಾರತಕ್ಕೆ ಕರೆತರುವಲ್ಲಿ ಪ್ರತಾಪ್ ರೆಡ್ಡಿ ನೇತೃತ್ವದ ತಂಡ ಪ್ರಮುಖ ಪಾತ್ರ ವಹಿಸಿದ್ದರು. ಪಶ್ವಿಮ ವಲಯ ಐಜಿಪಿಯಾಗಿದ್ದ ಪ್ರತಾಪ್ ರೆಡ್ಡಿ2009 ರಲ್ಲೇ ಇಂಟರ್ ಪೋಲ್ ನೆರವಿನೊಂದಿಗೆ ಜಗತ್ತಿನಾದ್ಯಂತ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿ ಬನ್ನಂಜೆಯನ್ನು ಬಂಧಿಸುವಂತೆ ಮನವಿ ಮಾಡಿದ್ದರು. ಪರಾರಿಯಾದವರ ಬಗ್ಗೆ ವಿವರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರು ಮತ್ತು ಇಂಟರ್‌ಪೋಲ್‌ನೊಂದಿಗೆ ನೆಟ್‌ವರ್ಕ್ ಸಾಧಿಸಿದ್ದರು. ಈ ಮೂಲಕ 2014 ರಲ್ಲಿ ಮೊರೊಕ್ಕೋದಲ್ಲಿ ಬನ್ನಂಜೆ ರಾಜನನ್ನು ಬಂಧಿಸಿ ಅವರೊಂದಿಗೆ ದಾಖಲೆ ಪತ್ರಗಳನ್ನು ವಿನಿಮಯ ಮಾಡಿ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.