Connect with us

BANTWAL

ಪೂಜಾರಿಯ ಪಾದ ಪೂಜೆ ಮಾಡುತ್ತಿರುವ ಕಾಂಗ್ರೇಸ್ ಅಭ್ಯರ್ಥಿಗಳು

ಪೂಜಾರಿಯ ಪಾದ ಪೂಜೆ ಮಾಡುತ್ತಿರುವ ಕಾಂಗ್ರೇಸ್ ಅಭ್ಯರ್ಥಿಗಳು

ಮಂಗಳೂರು, ಎಪ್ರಿಲ್ 20 : ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಶಿಷ್ಠವಾದ ಸಮೂಹಸನ್ನಿಯೊಂದು ನಿರ್ಮಾಣವಾಗಿದೆ. ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿಯವರ ಆಶೀರ್ವಾದ ಪಡೆಯಲು ಕಾಂಗ್ರೇಸ್ ಅಭ್ಯರ್ಥಿಗಳು ಒಬ್ಬರಿಂದ ಒಬ್ಬರು ಪೂಜಾರಿ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.

ಚುನಾವಣೆಯ ಹಿನ್ನಲೆಯಲ್ಲಿ ಕರಾವಳಿಯ ಕೈ ನಾಯಕರು ಜನಾರ್ಧನ ಪೂಜಾರಿಯವರ ಕಾಲಿಗೆರಗುವ ಹೈ ಡ್ರಾಮಾ ಶುರುವಾಗಿದೆ. ಈ ಹಿಂದೆ ಪೂಜಾರಿ ಗರಡಿಯಲ್ಲೇ ಪಳಗಿ, ಗುರುವಿಗೇ ತಿರುಮಂತ್ರ ಹಾಕಿ ಹೀನಾಯಮಾನವಾಗಿ ನಿಂದಿಸಿದ್ದ ಬಂಟ್ವಾಳ ಕ್ಷೇತ್ರದ ಹುಲಿ ರಮಾನಾಥ ರೈ ಗುರುವಿನ ಪಾದಕ್ಕೆರಗಿ ಶರಣಾಗಿದ್ದಾರೆ.

ರಮಾನಾಥ ರೈ ಪೂಜಾರಿಯವರ ಪಾದಪೂಜೆ ಮಾಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ಸಮೂಹ ಸನ್ನಿಗೊಳಗಾದಂತೆ, ಹಿರಿಯ ಕಾಂಗ್ರೆಸಿಗ ಪೂಜಾರಿಯವರ ಪಾದಕ್ಕೆರಗಿ ಶರಣು ಶರಣು ಎನ್ನುತ್ತಿದ್ದಾರೆ. ಕಾಪು ಕ್ಷೇತ್ರದ ವಿನಯ್ ಕುಮಾರ್ ಸೊರಕೆ, ಮಂಗಳೂರು ಉತ್ತರ ಕ್ಷೇತ್ರದ ಮೊಹಿಯುದ್ದೀನ್ ಬಾವಾ, ಬೆಳ್ತಂಗಡಿ ಕ್ಷೇತ್ರದ ವಸಂತ ಬಂಗೇರ, ಹೀಗೆ ಪೂಜಾರಿ ಪಾದ ಪೂಜೆ ಮಾಡಿದವರ ಪಟ್ಟಿ ಮುಂದುವರೆದಿದೆ.

ಕಾಂಗ್ರೆಸ್ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸುವುದಕ್ಕೂ ಮುನ್ನ ಹಿರಿಯ ಕಾಂಗ್ರೆಸ್ಸಿಗರು ಬಿ. ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ 2 ವರ್ಷಗಳಿಂದ ಪಕ್ಷದ ಕಾರ್ಯಕ್ರಮಗಳಿಂದ ಪೂಜಾರಿ ಅವರನ್ನು ದೂರವಿಟ್ಟಿದ್ದ ಕಾಂಗ್ರೆಸ್ಸಿಗರಿಗೆ ಈಗ ಏಕಾಏಕಿ ಪೂಜಾರಿ ಅವರ ನೆನಪಾಗುತ್ತಿದೆ. ಇದಕ್ಕೆ ಕಾರಣ ಜನಾರ್ಧನ ಪೂಜಾರಿ ಬಿಲ್ಲವ ಸಮುದಾಯದ ಪ್ರಮುಖ ಮುಖಂಡ ಎಂದು ಗುರುತಿಸಲಾಗುತ್ತದೆ . ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಲ್ಲವ ಮತಗಳೇ ನಿರ್ಣಾಯಕ . ಈ ಹಿನ್ನೆಲೆಯಲ್ಲಿ ಬಿಲ್ಲವರನ್ನು ಓಲೈಸುವ ತಂತ್ರಗಾರಿಕೆ ಇದಾಗಿದೆ ಎಂದು ವಿಮರ್ಶಿಸಲಾಗುತ್ತಿದೆ. ಆದರೆ ಪಕ್ಷದ ಹಿರಿಯ ನಾಯಕ ಜನಾರ್ಧನ ಪೂಜಾರಿ ಅನಾರೋಗ್ಯದ ನಡುವೆಯೂ ಹಿಂದಿನ ಕಹಿ ಅನುಭವ ಗಳನ್ನು ಮರೆತು ಮನೆಗೆ ಬಂದ ಪಕ್ಷದ ಅಭ್ಯರ್ಥಿಗಳನ್ನು ಮನಪೂರ್ವಕ ಹರಸಿ ಕಳುಹಿಸಿ ಕೊಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವ ಬಿಲ್ಲವ ಮತದಾರರಲ್ಲಿ ರಮಾನಾಥ್ ರೈ ವಿರುದ್ಧ ಆಕ್ರೋಶ ಮಡುಗಟ್ಟಿದೆ. . ಪೂಜಾರಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದೇ ರಮಾನಾಥ ರೈ ಸೇರಿದಂತೆ ಇನ್ನಿತರ ಅವರ ಬೆಂಬಲಿಗ ಮುಖಂಡರು ಎಂಬ ಆರೋಪವೂ ಕೇಳಿಬಂದಿತ್ತು. ರಾಜ್ಯ ಸರಕಾರದ ಕೆಲ ನೀತಿಗಳ ವಿರುದ್ದ ಜನಾರ್ಧನ ಪೂಜಾರಿ ಬಹಿಂಗವಾಗಿಯೇ ತರಾಡೆಗೆ ತೆಗೆದು ಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಗಳ ವಿರುದ್ಧ ಕಿಡಿಕಾರಿದ್ದರು. ಆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಅಂತರ ಕಾಯ್ದು ಕೊಂಡಿದ್ದರು.

ಪೂಜಾರಿಯವರ ವಿರುದ್ದ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದು ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಜನಾರ್ಧನ ಪೂಜಾರಿಯವರನ್ನು ಮಾನಸಿಕವಾಗಿ ಕುಗ್ಗಿಸಿದ್ದು ತಮ್ಮ ನೋವನ್ನು ಸಾರ್ವಜನಿಕವಾಗಿ ಅತ್ತು ತೋಡಿಕೊಂಡಿದ್ದು ಇದೆ.

ರಾಜ್ಯ ವಿಧಾನಸಭೆಯ ಚುನಾವಣೆಯ ಟಿಕೆಟ್ ಸಿಗುತ್ತಿದ್ದಂತೆ, ಕಾಂಗ್ರೇಸ್ ನ ನಾಯಕರಿಗೆ ತಮ್ಮ ಹಿರಿಯ ಮುಖಂಡ ಜನಾರ್ಧನ ಪೂಜಾರಿ ನೆನಪಾಗಿದ್ದಾರೆ. ಈ ಹಿನ್ನಲೆಯಲ್ಲಿ ದಿನಕ್ಕೊಬ್ಬರಂತೆ ಪೂಜಾರಿ ಅವರ ಪಾದ ಪೂಜೆಯಲ್ಲಿ ಕಾಂಗ್ರೇಸ್ ನಾಯಕರು ತೊಡಗಿದ್ದಾರೆ.