ಕೋಸ್ಟ್ ಗಾರ್ಡ್ ಕಾರ್ಯಾಚರಣೆ :ಓರ್ವ ಸಾವು 15 ಮೀನುಗಾರರ ರಕ್ಷಣೆ

ಮಂಗಳೂರು, ಡಿಸೆಂಬರ್ 07 :ಕೇರಳದ ಬೇಕೂರಿನಿಂದ ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಬೋಟ್‌ವೊಂದರಿಂದ ಕಾರ್ಮಿಕನೋರ್ವ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಈ ಬೋಟ್‌ನಲ್ಲಿದ್ದ ಉಳಿದ ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ್ದಾರೆ.

ಕೇರಳದ ಬೇಕೂರಿನಿಂದ ಮೀನುಗಾರಿಕೆಗೆ 16 ಮಂದಿ ಕಾರ್ಮಿಕರಿದ್ದ ಗೈನ್ ಹೆಸರಿನ ಬೋಟ್ ಅರಬ್ಬೀ ಸಮುದ್ರಕ್ಕೆ ತೆರಳಿತ್ತು.

ಆದರೆ, ಬುಧವಾರ ಸಂಜೆ ವೇಳೆ ಬೋಟ್‌ನಲ್ಲಿದ್ದ ಕಾರ್ಮಿಕ ತಮಿಳುನಾಡು ಕನ್ಯಾಕುಮಾರಿ ನಿವಾಸಿ 61 ವರ್ಷದ ಸೆಲುವಾಯ್ ಡಿಕ್ರೂಸ್ ಕಾಲು ಜಾರಿ ಸಮುದ್ರದ ನೀರಿನಲ್ಲಿ ಕಾಣೆಯಾಗಿದ್ದರು ಎನ್ನಲಾಗಿದೆ.

ಘಟನೆ ಬಳಿಕ ಬೋಟ್‌ನಲ್ಲಿದ್ದ ಉಳಿದ ಕಾರ್ಮಿಕರು ಒತ್ತಡ ಹಾಗೂ ಸಂಕಷ್ಟದಲ್ಲಿರುವುದನ್ನು ಅರಿತ ಬೋಟ್ ಮಾಲಕ ನಿಸಾರ್ ಹನೀಫ್ ಕೋಸ್ಟ್ ಗಾರ್ಡ್ ಅಧಿಕಾರಿಗಳ ಸಹಾಯ ಯಾಚಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಸಮುದ್ರದಲ್ಲಿ ಗಸ್ತಿನಲ್ಲಿದ್ದ ಅಮರ್ತ್ಯ ಹೆಸರಿನ ರಕ್ಷಣಾ ಹಡಗಿನ ಮೂಲಕ ಘಟನಾ ಸ್ಥಳಕ್ಕೆ ಧಾವಿಸಿ ಸಂಕಷ್ಟಲ್ಲಿದ್ದ ಉಳಿದ 15 ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.‌

ಬಳಿಕ ರಕ್ಷಣೆಗೊಳಗಾದ ಕಾರ್ಮಿಕರನ್ನು ಕೇರಳ ಕಣ್ಣೂರಿನ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ.‌ ಸಮುದ್ರದ ನೀರಿನಲ್ಲಿ ಕಣ್ಮರೆಯಾಗಿದ್ದ ವ್ಯಕ್ತಿಯ ಮೃತದೇಹ ಗುರುವಾರ ಮಧ್ಯಾಹ್ನ ಪತ್ತೆಯಾಗಿದ್ದು, ಮೃತದೇಹವನ್ನು ಕೇರಳದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Facebook Comments

comments