ಮಂಗಳೂರು ಜುಲೈ,31 : ಕರಾವಳಿ ನಗರಿ ಮಂಗಳೂರು ಹಾಗೂ ಉದ್ಯಾನ ನಗರಿ ಬೆಂಗಳೂರು ಸಂಪರ್ಕದ ರಾಷ್ಟೀಯ ಹೆದ್ದಾರಿ 75ರ ಬಿ.ಸಿ.ರೋಡ್  – ಶಿರಾಡಿ  ಹೆದ್ದಾರಿ ಮೇಲ್ದರ್ಜೆಗೆರಿಸಿ  ಚತುಷ್ಪಥ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆ ಮಾಡುವ ಮಹತ್ವದ ಕಾಮಗಾರಿ ಆರಂಭಗೊಂಡಿದೆ.ಈಗಾಗಲೇ ರಸ್ತೆ ಬದಿಯ ಮರಗಳನ್ನು ತೆರವು ಮಾಡುವ ಮತ್ತು ರಸ್ತೆಯ ಎರಡು ಬದಿಯ ಸ್ಥಳವನ್ನು ವಿಸ್ತರಣೆ ಮಾಡುವ ಕಾಮಗಾರಿ ಆರಂಭಗೊಂಡಿದೆ. ಒಟ್ಟು 63 ಕಿಲೋ ಮೀಟರ್ ಉದ್ದದ ಈ ಕಾಮಗಾರಿ ಮುಗಿಸಲು ಮೂರು ವರ್ಷಗಳ ಸಮಯ ನಿಧಿಗೊಳಿಸಲಾಗಿದ್ದು, ನಿಗದಿತ ಅವಧಿಯಲ್ಲಿ  ಪೂರ್ಣಗೊಂಡದ್ದೇ ಆದಲ್ಲಿ ಬೆಂಗಳೂರನ್ನು ಅತೀ ಕಡಿಮೆ ಸಮಯ ಮತ್ತು ಹೆಚ್ಚು ಸುರಕ್ಷಿತವಾಗಿ ತಲುಪಲು ಇದರಿಂದ ಸಾಧ್ಯವಾಗುವುದು.

2016ರ ಮಾರ್ಚ್ 28ರಂದು ಪಣಂಬೂರುನಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕಾಮಗಾರಿಗೆ ಶಿಲನ್ಯಾಸ ನಡೆಸಿದ್ದರು. ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ರೂ. 1,064 ಕೋಟಿ ವೆಚ್ಚದ ಯೋಜನೆ ಇದಾಗಿದೆ.  ಬಿ.ಸಿ.ರೋಡ್ ನಿಂದ ಶಿರಾಡಿ ಅಡ್ಡಹೊಳೆ ತನಕ  63 ಕಿಲೋ ಮೀಟರ್ ಉದ್ದ ರಸ್ತೆ ನಾಲ್ಕು ಪಥಗಳ ರಸ್ತೆಯಾಗಿ ಮಾರ್ಪಾಡು ಆಗಲಿದ್ದು, ಕಾಮಗಾರಿ ನಿರ್ವಹಣೆ ಗುತ್ತಿಗೆಯನ್ನು ರಸ್ತೆಗಳ ನಿರ್ಮಾಣಕ್ಕೆ ಖ್ಯಾತಿ ಪಡೆದ  ಎಲ್ ಅಂಡ್ ಟಿ ಕಂಪೆನಿಗೆ  ವಹಿಸಲಾಗಿದೆ. 

ಈ ಚತುಷ್ಪಥ ಕಾಂಕ್ರೀಟ್ ರಸ್ತೆ ದ.ಕ. ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶಿರಾಡಿ, ಶಿರಿಬಾಗಿಲು, ನೂಜಿಬಾಳ್ತಿಲ, ಇಚ್ಲಂಪಾಡಿ, ನೆಲ್ಯಾಡಿ, ಕೊಣಾಲು, ಗೋಳಿತೊಟ್ಟು,  ಬಜತ್ತೂರು,ಉಪ್ಪಿನಂಗಡಿ, 34-ನೆಕ್ಕಿಲಾಡಿ, ಬೆಳ್ತಂಗಡಿ ತಾಲ್ಲೂಕಿನ ರೆಖ್ಯಾ, ಬಂಟ್ವಾಳ ತಾಲ್ಲೂಕಿನ ಬಿಳಿಯೂರು, ಪೆರ್ನೆ ಕೆದಿಲ, ಮಾಣಿ, ಬಾಳ್ತಿಲ, ಗೋಳ್ತಮಜಲು, ಪಾಣೆ ಮಂಗಳೂರು ಕಸಬಾ, ನರಿಕೊಂಬು, ಮೂಡ ಸೇರಿದಂತೆ ಒಟ್ಟು 20 ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಹಾದು ಹೋಗಲಿದೆ. ಈ ಪ್ರದೇಶದಲ್ಲಿ ಅಗತ್ಯ ಇರುವ ಭೂಮಿಗಳ ಸ್ವಾಧೀನ ಪ್ರಕ್ರಿಯೆಗಳು ಬಹುತೇಕ ಮುಗಿದಿವೆ.ಬಿ.ಸಿ. ರೋಡ್ ನಿಂದ ಅಡ್ಡಹೊಳೆ ತನಕ ಪುತ್ತೂರು, ಮತ್ತು ಬಂಟ್ವಾಳ ತಾಲ್ಲೂಕು ವ್ಯಾಪ್ತಿಯಲ್ಲಿ ಉಪ್ಪಿನಂಗಡಿ, ಪಂಜ, ಪುತ್ತೂರು, ಬಂಟ್ವಾಳ  ಹೀಗೆ 4 ವಲಯ ಅರಣ್ಯ ವ್ಯಾಪ್ತಿ ಹಾದು ಹೋಗುತ್ತಿದ್ದು,10,000 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ.ಈಗಾಗಲೇ ಮರಗಳ ತೆರವು ಕಾರ್ಯ ಆರಂಭಗೊಂಡಿದ್ದು ಶೇ 70ರಷ್ಟು ಮರಗಳನ್ನು ಈಗಾಗಲೇ ಕಡಿಯಲಾಗಿದೆ. ಅಡ್ಡಹೊಳೆ ಮತ್ತು ಬಿ.ಸಿ.ರೋಡ್ ಮಧ್ಯೆ ಉಪ್ಪಿನಂಗಡಿ ಮತ್ತು ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಾಣ ಆಗಲಿದೆ. ಹಾಗೂ ಧರ್ಮಸ್ಥಳ ಕ್ರಾಸ್ ರಸ್ತೆ ಪೆರಿಯಾ ಶಾಮತಿ ಮತ್ತು ಮಾಣಿಯಲ್ಲಿ ಹೆದ್ದಾರಿಗೆ ಸಮನಾಂತರವಾಗಿ ಓವರ್ ಪಾಸ್ ರಸ್ತೆಗಳ ನಿರ್ಮಾಣವಾಗಲಿದೆ. ಉಪ್ಪಿನಂಗಡಿ ಕುಮಾರಧಾರ ಮತ್ತು ಪಾಣೆಮಂಗಳೂರು ನೇತ್ರಾವತಿ  ನದಿಗಳಿಗೆ ಮತ್ತೆರಡು ಸೇತುವೆಗಳು ನಿರ್ಮಾಣಗೊಳ್ಳಲಿದೆ. ಈ ಎಲ್ಲಾ ಕಾಮಗಾರಿಗಳು ಮೂರು ವರ್ಷಗಳ ಅಂತರದಲ್ಲಿ ಪೂರ್ಣಗೊಳ್ಳಬೇಕಿದೆ. ನಿಗದಿತ ಅವಧಿಯಲ್ಲಿ  ಪೂರ್ಣಗೊಂಡದ್ದೇ ಆದಲ್ಲಿ  ಬೆಂಗಳೂರನ್ನು ಅತೀ ಕಡಿಮೆ ಮತ್ತು ಹೆಚ್ಚು ಸುರಕ್ಷಿತವಾಗಿ ತಲುಪಲು ಇದರಿಂದ ಸಾಧ್ಯವಾಗುವುದು ಮಾತ್ರವಲ್ಲ ಎರಡೂ ನಗರಗಳ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗೆ ಹೆಚ್ಚು ಸಹಕಾರಿಯಾಗಲಿದೆ.