LATEST NEWS
ಭಾರೀ ಮಳೆಗೆ ತಡೆಗೋಡೆ ಕುಸಿದು ಯುವಕ ಸಾವು
ಮಂಗಳೂರು ಸೆಪ್ಟೆಂಬರ್ 19 : ತಡೆಗೋಡೆ ಕುಸಿತದಿಂದ ಮಣ್ಣಿನಡಿ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಗರದ ಕೂಳೂರಿನಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಉಮೇಶ್ ಎಂದು ಗುರುತಿಸಲಾಗಿದೆ. ಈತ ನಗರದ ಕೂಳೂರಿನ ಸಂತ ಅಂತೋನಿಯವರ ಚರ್ಚ್ ಸಮೀಪದ ಮನೆಯೊಂದರಲ್ಲಿ ಕಾಮಗಾರಿ ನಡೆಸುತ್ತಿದ್ದರು. ಈ ಸಂದರ್ಭ ಚರ್ಚ್ ನ ತಡೆಗೋಡೆ ಕುಸಿದು ಸಾವನಪ್ಪಿದ್ದಾರೆ.
ಕರಾವಳಿಯಲ್ಲಿ ನಿನ್ನೆಯಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು, ಇನ್ನು ಎರಡು ದಿನ ರೆಡ್ ಅಲರ್ಟ್ ನ್ನು ಘೋಷಿಸಲಾಗಿದೆ. ಇಂದು ಬೆಳಿಗ್ಗೆಯಿಂದಲೇ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಮಳೆ ಅಡ್ಡಿಯಾಗುತ್ತದೆ ಎಂದು ಕಾರ್ಮಿಕರು ಹಿಂದೆ ತೆರಳಿದ್ದರು. ಆದರೆ ಅನತಿ ದೂರ ಸಾಗಿದಾಗ ಮಳೆ ಕೊಂಚ ಕಡಿಮೆಯಾದ ಕಾರಣ ಮರಳಿ ಕೆಲಸ ನಿರ್ವಹಿಸಲು ಹಿಂದೆ ಬಂದಿದ್ದಾರೆ.
ಇನ್ನೇನು ಕಾಮಗಾರಿ ನಿರ್ವಹಿಸಲು ಆರಂಭ ಮಾಡಬೇಕೆನ್ನುವಾಗ ಏಕಾಏಕಿ ಚರ್ಚನ ತಡೆಗೋಡೆ ಕುಸಿದಿದೆ. ಅಪಾಯದ ಮುನ್ಸೂಚನೆ ಅರಿತು ಮೂವರೂ ಅಲ್ಲಿಂದ ಪಾರಾಗಲು ಯತ್ನಿಸಿದ್ದಾರೆ. ಆದರೆ ಮೃತ ಉಮೇಶ್ ಅವರಿಗೆ ಅಲ್ಲಿಯೇ ಇದ್ದ ಸಣ್ಣ ಹೊಂಡದಲ್ಲಿ ಕಾಲು ಸಿಲುಕಿ ಓಡಲು ಆಗಿಲ್ಲ. ಅಷ್ಟು ಹೊತ್ತಿಗೆ ಮಣ್ಣು-ಕಲ್ಲು ಸಹಿತ ತಡೆಗೋಡೆ ಅವರ ಮೇಲೆಯೇ ಕುಸಿದು ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ತಕ್ಷಣ ಕಾವೂರು ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಮೃತದೇಹವನ್ನು ಮೇಲೆತ್ತಿದ್ದಾರೆ.
ಪ್ರತಿ ಭಾರಿ ಮಳೆಗಾಲದಲ್ಲಿ ಈ ರೀತಿಯ ತಡೆಗೋಡೆ ಕುಸಿತಗಳು ನಡೆಯುತ್ತಲೇ ಇದ್ದು, ಕಾರ್ಮಿಕರು ಸಾವನಪ್ಪುತ್ತಲೆ ಇದ್ದಾರೆ. ಹವಮಾನ ಇಲಾಖೆ ಭಾರೀ ಮಳೆ ಮುನ್ಸೂಚನೆ ನೀಡಿದ ನಂತರ ಜಿಲ್ಲಾಡಳಿತ ಈ ರೀತಿಯ ಕಾಮಗಾರಿಗಳನ್ನು ನಡೆಸದಂತೆ ಸೂಚನೆ ನೀಡಬಹುದಿತ್ತು, ಆದರೆ ಕೇವಲ ಹವಮಾನ ಇಲಾಖೆ ಮುನ್ಸೂಚನೆ ಮೀನುಗಾರರಿಗೆ ಮಾತ್ರ ಅನ್ವಯಿಸುವಂತೆ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ ನೀಡಿ ಸುಮ್ಮನೆ ಕುಳಿತಿದೆ.