LATEST NEWS
ಕ್ರಿಶ್ಚಿಯನ್ನರ ಹಿಂದೆ ಬಿದ್ದ ಲವ್ ಜಿಹಾದ್ ಭೂತ ಕೇರಳದಲ್ಲಿ ತಲ್ಲಣ ಮೂಡಿಸಿದ ಕೋಝಿಕ್ಕೋಡ್ ಪ್ರಕರಣಗಳು
ಕ್ರಿಶ್ಚಿಯನ್ನರ ಹಿಂದೆ ಬಿದ್ದ ಲವ್ ಜಿಹಾದ್ ಭೂತ ಕೇರಳದಲ್ಲಿ ತಲ್ಲಣ ಮೂಡಿಸಿದ ಕೋಝಿಕ್ಕೋಡ್ ಪ್ರಕರಣಗಳು
ಕೇರಳ ಅಕ್ಟೋಬರ್ 4: ಕೇರಳದಲ್ಲಿ ಲವ್ ಜಿಹಾದ್ ಬಿಸಿ ಈಗ ಕ್ರಿಶ್ಚಿಯನ್ನರಿಗೂ ತಟ್ಟಿದೆ. ಕ್ರಿಶ್ಚಿಯನ್ ಯುವತಿಯರು ಲವ್ ಜಿಹಾದ್ ಭೂತಕ್ಕೆ ಬಲಿಯಾಗುತ್ತಿರುವುದನ್ನು ಕಂಡು ಬೇಸತ್ತ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್, ಕೇಂದ್ರ ಸರಕಾರದ ಮೊರೆ ಹೋಗಿದ್ದಾರೆ. ಲವ್ ಜಿಹಾದ್ ಬಗ್ಗೆ ಎನ್ ಐಎ ಮೂಲಕ ಸಮಗ್ರ ತನಿಖೆ ನಡೆಸಬೇಕೆಂದು ಜಾರ್ಜ್ ಕುರಿಯನ್ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದಿದ್ದಾರೆ.
ಲವ್ ಜಿಹಾದ್ ಭೂತಕ್ಕೆ ಕ್ರಿಶ್ಚಿಯನ್ನ ಯುವತಿಯರು ಸಾಫ್ಟ್ ಟಾರ್ಗೆಟ್ ಆಗಿದ್ದಾರೆ. ಲವ್ ಜಿಹಾದಿಗೆ ಬಲಿಯಾದ ಯುವತಿಯರನ್ನು ಮತಾಂತರಿಸುವುದು ಒಂದು ಸಂಘಟನಾತ್ಮಕ ಪ್ರಕ್ರಿಯೆ. ಹೀಗೆ ಬಲಿ ಬಿದ್ದ ಯುವತಿಯರನ್ನು ಬಳಿಕ ಇಸ್ಲಾಂ ಮತಾಂಧ ಶಕ್ತಿಗಳು ಭಯೋತ್ಪಾದನಾ ಕೃತ್ಯಗಳಿಗೆ ಬಳಸುತ್ತಿದ್ದಾರೆ.
ಸಿರಿಯಾ ಮೂಲದ ಐಸಿಸ್ ಉಗ್ರವಾದಿ ಸಂಘಟನೆಗೆ ಪೂರೈಕೆ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಕೇರಳದಲ್ಲಿ ಸಮುದಾಯಗಳ ಮಧ್ಯೆ ಸಾಮರಸ್ಯ ಕದಡುವ ಸಾಧ್ಯತೆಯಿದೆ. ಈ ವಿಚಾರದ ಬಗ್ಗೆ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ, ಇಸ್ಲಾಮಿಕ್ ಮತಾಂಧರ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರಬಲ ಕಾನೂನು ಜಾರಿಮಾಡಬೇಕಿದೆ ಎಂದು ಕುರಿಯನ್ ಆಗ್ರಹಿಸಿದ್ದಾರೆ. ಇದಲ್ಲದೆ, ಮೂರು ವರ್ಷಗಳ ಹಿಂದೆ ಕೇರಳದಿಂದ ಐಸಿಸ್ ಸಂಘಟನೆ ಸೇರಿದ್ದ 21 ಮಂದಿಯಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದ ಐವರು ಕ್ರಿಶ್ಚಿಯನ್ನಯುವತಿಯರೂ ಇದ್ದರು ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ.
ಇಷ್ಟಕ್ಕೂ ಜಾರ್ಜ್ ಕುರಿಯನ್ ಈ ಪತ್ರ ಬರೆಯಲು ಕಾರಣವಾಗಿದ್ದು ಎರಡು ಕ್ರಿಶ್ಚಿಯನ್ನ ಕುಟುಂಬಗಳು ಆಯೋಗಕ್ಕೆ ನೀಡಿದ್ದ ದೂರು. ಎರಡೂ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಾಲ್ಕು ತಿಂಗಳು ಹಿಂದೆ ನಡೆದಿರುವ ಘಟನೆಗಳು.
ಹೆತ್ತವರು ನೀಡಿದ ಒಂದು ದೂರಿನ ಪ್ರಕಾರ, 19 ವರ್ಷದ ಅವರ ಪುತ್ರಿ ಕೋಝಿಕ್ಕೋಡ್ ನಗರದಲ್ಲಿರುವ ಕ್ರಿಶ್ಚಿಯನ್ನ ಕಾಲೇಜಿನಲ್ಲಿ ಓದುತ್ತಿದ್ದಳು. ಆಕೆ, ಕಳೆದ ಜುಲೈ 7 ರಂದು ಕೋಝಿಕ್ಕೋಡಿನ ಸರೋವರಂ ಬಯೋ ಥೀಮ್ ಪಾರ್ಕ್ ತೆರಳಿದ್ದ ವೇಳೆ ಭಯಾನಕ ಘಟನೆ ನಡೆದಿತ್ತು.
ಗೆಳೆಯರೊಂದಿಗೆ ಪಾರ್ಕಿಗೆ ಹೋಗಿದ್ದಾಗ, ಆಕೆಯ ಟ್ಯುಟೋರಿಯಲ್ ಸಹಪಾಠಿಯಾಗಿದ್ದ ಜಾಸಿಂ ಎನ್ನುವ 19 ವರ್ಷದ ಯುವಕ ಸಿಕ್ಕಿದ್ದ. ಜಾಸಿಂ, ಯುವತಿಗೆ ಮತ್ತು ಬರಿಸುವ ಜ್ಯೂಸ್ ನೀಡಿದ್ದಲ್ಲದೆ, ಅದೇ ಪಾರ್ಕಿನ ಬಿಲ್ಡಿಂಗ್ ಒಂದರಲ್ಲಿ ಯುವತಿಯನ್ನು ಅತ್ಯಾಚಾರ ಮಾಡಿ ವಿಡಿಯೋ ಚಿತ್ರೀಕರಿಸಿದ್ದ.
ಆನಂತರ ವಿಡಿಯೋ ಮುಂದಿಟ್ಟು ಬ್ಲಾಕ್ ಮೇಲ್ ಮಾಡಿದ್ದಲ್ಲದೆ, ಇಸ್ಲಾಂಗೆ ಮತಾಂತರ ಆಗುವಂತೆ ಬಲವಂತ ಪಡಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ಬಗ್ಗೆ ಕಳೆದ ಆಗಸ್ಟ್ 5ರಂದು ನಡಕ್ಕಾವ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಯಾವುದೇ ಪ್ರಗತಿಯಾಗಿಲ್ಲ. ಆರೋಪಿಯನ್ನು ವಿಚಾರಣೆ ನಡೆಸಿ ಬಿಟ್ಟುಬಿಟ್ಟಿದ್ದಾರೆ ಎಂದು ಹೆತ್ತವರು ಆಯೋಗಕ್ಕೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ದೆಹಲಿ ಮೂಲದ ಕುಟುಂಬವಾಗಿದ್ದು, ಕಾಲೇಜು ಓದುತ್ತಿದ್ದ ಯುವತಿ ನಾಪತ್ತೆಯಾಗಿದ್ದಾಳೆ. ಆಕೆಯನ್ನು ಇಸ್ಲಾಂಗೆ ಮತಾಂತರಿಸಿ ವಿದೇಶಕ್ಕೆ ಒಯ್ಯಲಾಗಿದೆ ಎಂದು ಹೆತ್ತವರು ದೂರು ನೀಡಿದ್ದರು.
ಈ ಎರಡು ದೂರಿನ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಕೇಂದ್ರಕ್ಕೆ ಪತ್ರ ಬರೆದಿದ್ದು, ಯುವತಿಯರನ್ನು ಮತಾಂತರಿಸಿ, ಐಸಿಸ್ ಸಂಘಟನೆಗೆ ಪೂರೈಕೆ ಮಾಡುವ ಜಾಲ ಕೇರಳದಲ್ಲಿ ಸಕ್ರಿಯವಾಗಿದೆ.
ಐಸಿಸ್ ಸೇರ್ಪಡೆಯಾದ ಯುವತಿಯರು ಉಗ್ರರ ಕಾಮತೃಷೆ ತೀರಿಸುವುದಕ್ಕಾಗಿ ಬಳಕೆಯಾಗುತ್ತಿದ್ದಾರೆ. ಕೇರಳದಲ್ಲಿ ಇಂಥ ಕೃತ್ಯಗಳಿಂದಾಗಿ ಗಂಭೀರ ಸ್ಥಿತಿ ಎದುರಾಗಿದ್ದರೂ, ರಾಜ್ಯದ ಎಡಪಂಥೀಯ ಸರಕಾರ ಆರೋಪಿಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
2015ರಲ್ಲಿ ಕೇರಳ ಕೆಥೋಲಿಕ್ಸ್ ಬಿಷಪ್ಸ್ ಕೌನ್ಸಿಲ್ ತನ್ನ ಮುಖವಾಣಿ ‘ಜಾಗ್ರತಾ’ದಲ್ಲಿ ಪ್ರಕಟಿಸಿದ ಮಾಹಿತಿ ಪ್ರಕಾರ, 2008ರಿಂದ 2012ರ ನಡುವೆ ಕೇರಳದಲ್ಲಿ ನಾಲ್ಕು ಸಾವಿರ ಯುವತಿಯರು ಲವ್ ಜಿಹಾದಿಗೆ ಒಳಗಾಗಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದಿತ್ತು.
ಆ ಬಳಿಕ ಲವ್ ಜಿಹಾದ್ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದಲ್ಲದೆ, ಕೇರಳ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿತ್ತು. ವಿಧಾನಸಭೆ ಚರ್ಚೆಯಲ್ಲಿ ಆಗಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಲ್ಲದೆ, 2006- 2012ರ ಅವಧಿಯಲ್ಲಿ 7713 ಮಂದಿ ಯುವತಿಯರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದರು. ಆನಂತ್ರ ರಾಷ್ಟ್ರೀಯ ತನಿಖಾ ದಳದಿಂದ ಲವ್ ಜಿಹಾದ್ ಕುರಿತ 11 ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗಿತ್ತು. ಹಾದಿಯಾ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೂ ಆಗಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಜಾರ್ಜ್ ಕುರಿಯನ್ ಕೇಂದ್ರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಲವ್ ಜಿಹಾದ್ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ಕೇರಳದಲ್ಲಿ ಅಕ್ಟೋಬರ್ 21ರಂದು ಐದು ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಈ ವಿಚಾರವೂ ಎಡರಂಗ ಸರಕಾರಕ್ಕೆ ಬಿಸಿ ತಟ್ಟುವ ಸಾಧ್ಯತೆಯಿದೆ.