LATEST NEWS
ಪಾಕ್ ದಡದಲ್ಲಿಯೇ ಚೀನಾ ನಿರ್ಮಿಸುತ್ತಿದೆ ನೌಕಾನೆಲೆ !!

ಹಿಂದು ಮಹಾಸಾಗರದಲ್ಲಿ ಹಿಡಿತ ಸಾಧಿಸಲು ಡ್ರ್ಯಾಗನ್ ಪ್ಲಾನ್
ನವದೆಹಲಿ, ಜೂನ್ 3, ಒಂದಲ್ಲ ಒಂದು ವಿಚಾರದಲ್ಲಿ ಭಾರತದ ವಿರುದ್ಧ ಕಾಲು ಕೆರೆಯುತ್ತಲೇ ಇರುವ ಡ್ಯ್ರಾಗನ್ ಚೀನಾ, ಈಗ ಪಾಕಿಸ್ಥಾನಕ್ಕೆ ಸೇರಿದ ಬಂದರಿನಲ್ಲಿ ರಹಸ್ಯ ನೌಕಾನೆಲೆ ನಿರ್ಮಿಸುತ್ತಿದೆಯೇ ಅನ್ನುವ ಅನುಮಾನ ಕೇಳಿಬಂದಿದೆ. ಪಾಕಿಸ್ಥಾನದ ಬಲೂಚಿಸ್ಥಾನ ಪ್ರಾಂತಕ್ಕೆ ಸೇರಿದ ಗ್ವಾದಾರ್ ಅನ್ನುವ ಬಂದರಿನ ಆವರಣದಲ್ಲಿ ಬೃಹತ್ ಭದ್ರತಾ ಗೋಡೆ ಕಟ್ಟಲಾಗುತ್ತಿದ್ದು, ಅಲ್ಲಿಯೇ ಚೀನಾದ ನೌಕಾನೆಲೆ ನಿರ್ಮಾಣ ಆಗಲಿದೆ ಅನ್ನುವ ಮಾತು ಕೇಳಿಬಂದಿದೆ.
ಫೋರ್ಬ್ಸ್ ಎನ್ನುವ ಏರೋಸ್ಪೇಸ್ ಮ್ಯಾಗಜಿನ್, ಈ ಬಗ್ಗೆ ಬೆಳಕು ಚೆಲ್ಲಿದ್ದು, ಡ್ರ್ಯಾಗನ್ ರಾಷ್ಟ್ರದ ಬಹುನಿರೀಕ್ಷಿತ ನೌಕಾನೆಲೆ ಗ್ವಾದಾರ್ ಬಂದರಿನಲ್ಲಿ ಆಗಲಿದೆ ಅನ್ನುವ ಅನುಮಾನ ವ್ಯಕ್ತಪಡಿಸಿದೆ. ಇತ್ತೀಚೆಗಿನ ಸ್ಯಾಟಲೈಟ್ ಫೋಟೋಗಳು ಗ್ವಾದಾರ್ ಬಂದರಿನಲ್ಲಿ ಬೃಹತ್ ಕಾಮಗಾರಿ ಆಗುತ್ತಿರುವುದನ್ನು ಖಚಿತಪಡಿಸಿದೆ. ಚೀನಾ ಮೂಲದ ಕಂಪನಿಗಳು ಕಾಮಗಾರಿ ನಿರತವಾಗಿರುವುದು ಅನುಮಾನ ಹುಟ್ಟಿಸಿದೆ. ಅಂಥದ್ದೊಂದು ನೌಕಾನೆಲೆಯನ್ನು ಚೀನಾ ಅಲ್ಲಿ ಸ್ಥಾಪಿಸಿದರೆ, ಹಿಂದು ಮಹಾಸಾಗರದಲ್ಲಿ ಅದು ಪ್ರಾಬಲ್ಯ ಸಾಧಿಸಲಿದೆ ಎಂದು ಮ್ಯಾಗಜಿನ್ ಬರೆದುಕೊಂಡಿದೆ.

‘ಬಂದರಿನ ಆವರಣದಲ್ಲಿ ಬೃಹತ್ ಭದ್ರತಾ ಗೋಡೆ ಸ್ಥಾಪಿಸುತ್ತಿರುವುದು ಕಂಡುಬಂದಿದೆ. ಚೀನಾ ದೇಶದಲ್ಲಿ ಬೃಹತ್ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸರಕಾರಿ ಒಡೆತನದ ಚೈನಾ ಕಮ್ಯುನಿಕೇಶನ್ಸ್ ಕನ್ ಸ್ಟ್ರಕ್ಷನ್ ಕಂಪನಿ (ಸಿಸಿಸಿ ಲಿ.) ಈ ಕಾಮಗಾರಿಯಲ್ಲಿ ಭಾಗಿಯಾಗಿದೆ. ಬಂದರಿನಲ್ಲಿ ಸಾಮಾನ್ಯವಾಗಿ ಇರುವ ಭದ್ರತೆಗಿಂತಲೂ ವಿಶೇಷ ರೀತಿಯ ಭದ್ರತೆಯನ್ನು ಇಲ್ಲಿ ಕಾಣಬಹುದಾಗಿದೆ ’ ಎಂದು ಮ್ಯಾಗಜಿನ್ ಹೇಳಿದೆ.
ಗ್ವಾದಾರ್ ಬಂದರು ಪಶ್ಚಿಮ ಪಾಕಿಸ್ಥಾನದ ದಡದಲ್ಲಿದ್ದು, ಇಲ್ಲಿಂದ ರಸ್ತೆ ಕಾರಿಡಾರ್ ರೆಡಿಯಾದರೆ ಪಾಕಿಸ್ಥಾನ ಮೂಲಕ ಚೀನಾ ತಲುಪಲು ಹತ್ತಿರದ ದಾರಿಯಾಗುತ್ತದೆ. ಇದರಿಂದ ಹಿಂದು ಮಹಾಸಾಗರದ ಕಡೆಯಿಂದ ಬರುವ ಹಡಗುಗಳು ದಕ್ಷಿಣ ಏಶ್ಯಾ ರಾಷ್ಟ್ರಗಳನ್ನು ಸುತ್ತುಬಳಸಿ ಸಾಗುವುದು ತಪ್ಪುತ್ತದೆ. 2018ರ ಜನವರಿಯಲ್ಲಿ ಚೀನಾ ದೇಶ, ಪಾಕಿಸ್ಥಾನ ದಡದಲ್ಲಿ ನೌಕಾನೆಲೆ ಸ್ಥಾಪಿಸುವ ವರದಿಗಳು ಬಂದಿದ್ದವು.
ಆದರೆ, ಯಾವುದೂ ಅಧಿಕೃತ ಆಗಿರಲಿಲ್ಲ. ಚೀನಾದ ಹಡಗುಗಳು 2017ರ ಮಾರ್ಚ್ ನಿಂದಲೇ ಗ್ವಾದಾರ್ ಬಂದರಿನಲ್ಲಿ ನಿಲ್ಲುತ್ತಿದ್ದವು. ಆದರೆ, ಅವುಗಳ ಸೆಕ್ಯುರಿಟಿಗೆ ತಕ್ಕಷ್ಟು ಬಂದರು ಬೆಳೆದಿರಲಿಲ್ಲ. ಹೀಗಾಗಿ ಚೀನಾ ಈಗ ಬಂದರಿನ ವಿಸ್ತರಣೆ ಮತ್ತು ಪ್ರತ್ಯೇಕ ಭದ್ರತಾ ವ್ಯೂಹ ರಚನೆಯಲ್ಲಿ ತೊಡಗಿರುವುದು ಸ್ಪಷ್ಟ ಎಂದು ವರದಿ ಹೇಳಿದೆ.
ಚೀನಾ ಈಗಾಗ್ಲೇ ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ)ದಲ್ಲಿ ಬೃಹತ್ ರಸ್ತೆ ಕಾಮಗಾರಿ ನಡೆಸುತ್ತಿದೆ ಅನ್ನುವ ವರದಿಗಳು ಬಂದಿದ್ದವು. ಈಗ ಪಾಕಿಸ್ಥಾನದ ದಡದಲ್ಲಿಯೇ ಬಂದರು ರಚಿಸುತ್ತಿರುವುದು ಕಾರಿಡಾರ್ ರಚನೆಯ ಉದ್ದೇಶ ಸ್ವಷ್ಟವಾಗಿರುವಂತೆ ಕಂಡುಬಂದಿದೆ. ಏನಿದ್ದರೂ, ಗ್ವಾದಾರಿನಲ್ಲಿ ಬೃಹತ್ ಬಂದರು ನಿರ್ಮಿಸಿ ಚೀನಾ ನೆಲೆನಿಂತರೆ ಅದರಿಂದ ಭಾರತಕ್ಕೇ ಅಪಾಯ. ಅಲ್ಲದೆ, ಅರಬ್ಬೀ ಸಮುದ್ರದ ಮೂಲಕ ಹಿಂದು ಮಹಾಸಾಗರದ ಹಿಡಿತವನ್ನೂ ತೆಗೆದುಕೊಳ್ಳುವ ಅಪಾಯವೂ ಇದೆ ಅನ್ನುತ್ತಾರೆ ಭದ್ರತಾ ತಜ್ಞರು.