LATEST NEWS
ಚಾಂಪಿಯನ್ಸ್ ಟ್ರೋಫಿ ಎಫೆಕ್ಟ್: ಪಾಕಿಸ್ತಾನದಲ್ಲಿ ಕೆಲಸ ಕಳೆದುಕೊಂಡ 100ಕ್ಕೂ ಅಧಿಕ ಪೊಲೀಸರು!

ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸಲು ನಿರಾಕರಿಸಿದ್ದಕ್ಕೆ ಪಾಕಿಸ್ತಾನದ 100ಕ್ಕೂ ಅಧಿಕ ಪೊಲೀಸರನ್ನು ಸೇವೆಯಿಂದಲೇ ವಜಾಗೊಳಿಸಿರುವುದಾಗಿ ಅಲ್ಲಿನ ಉನ್ನತ ಪೊಲೀಸ್ ಮೂಲಗಳು ಮಂಗಳವಾರ ಮಾಧ್ಯಮಗಳಿಗೆ (ಫೆ.25) ತಿಳಿಸಿವೆ.
ಸದ್ಯ ವಜಾಗೊಂಡಿರುವ 100ಕ್ಕೂ ಅಧಿಕ ಸಿಬ್ಬಂದಿ, ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ವರದಿಯಾಗಿದೆ.ಪೊಲೀಸ್ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಲಾಹೋರ್‌ನ ಗಡಾಫಿ ಕ್ರೀಡಾಂಗಣ ಮತ್ತು ಗೊತ್ತುಪಡಿಸಿದ ಹೋಟೆಲ್‌ಗಳ ನಡುವೆ ಪ್ರಯಾಣಿಸುವ ತಂಡಗಳಿಗೆ ಭದ್ರತೆ ಒದಗಿಸಲು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಆದರೆ, ಅವರು ಗೈರುಹಾಜರಾಗಿದ್ದರು. ಅಲ್ಲದೆ, ಕರ್ತವ್ಯಗಳನ್ನು ನಿಭಾಯಿಸಲು ಸಂಪೂರ್ಣವಾಗಿ ನಿರಾಕರಿಸಿದರು. ಈ ಕಾರಣಕ್ಕೆ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪಾಕಿಸ್ತಾನದ ಪಂಜಾಬ್ ಐಜಿಪಿ ಉಸ್ಮಾನ್ ಅನ್ವರ್ ಮಾತನಾಡಿದ್ದು, ಸಂಬಂಧಪಟ್ಟ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದೇವೆ. ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಭದ್ರತೆಯ ವಿಷಯದಲ್ಲಿ ಯಾವುದೇ ಸಣ್ಣ ನಿರ್ಲಕ್ಷ್ಯಕ್ಕೂ ಅವಕಾಶವಿಲ್ಲ ಎಂದಿದ್ದಾರೆ.
ಅಂದಹಾಗೆ ವಜಾಗೊಳಿಸಲಾದ ಪೊಲೀಸ್ ಸಿಬ್ಬಂದಿ ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಏಕೆ ನಿರಾಕರಿಸಿದರು ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಹಲವಾರು ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪೊಲೀಸ್ ಸಿಬ್ಬಂದಿ ಹೆಚ್ಚಿನ ಕೆಲಸದ ಸಮಯದಿಂದಾಗಿ, ಹೆಚ್ಚಿನ ಹೊರೆ ಅನುಭವಿಸುತ್ತಿದ್ದರು ಎನ್ನಲಾಗಿದೆ.
ನ್ಯೂಜಿಲೆಂಡ್ ಮತ್ತು ಭಾರತದ ವಿರುದ್ಧ ಹೀನಾಯ ಸೋಲಿನಿಂದಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಈಗಾಗಲೇ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಸಂಭಾವ್ಯ ಭಯೋತ್ಪಾದಕ ದಾಳಿಯ ಬೆದರಿಕೆಯ ಕುರಿತ ವರದಿಗಳು ಬರುತ್ತಿವೆ. ಆದರೆ, ಈ ವರದಿಗಳನ್ನು ಫೆಡರಲ್ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ತಳ್ಳಿಹಾಕಿದ್ದಾರೆ.
ಸೋಮವಾರ ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಚಿವರು, ಪಾಕಿಸ್ತಾನವು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಶಾಂತಿಯುತವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಆಯೋಜಿಸುತ್ತಿದೆ. ನಮ್ಮ ಮೈದಾನಗಳು ತುಂಬಿವೆ. ನಮಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಜನಸಮೂಹವು ಸಂತೋಷದಿಂದ ಸೇರುತ್ತಿದೆ. ನಮ್ಮ ಬೀದಿಗಳು ಕೂಡ ಕ್ರಿಕೆಟ್ ವಿಜಯವನ್ನು ಆಚರಿಸುವ ಜನರಿಂದ ತುಂಬಿವೆ ಎಂದು ಹೇಳುವ ಮೂಲಕ ಭಯೋತ್ಪಾದಕ ದಾಳಿಯ ವರದಿಯನ್ನು ತಳ್ಳಿಹಾಕಿದ್ದಾರೆ.