Connect with us

KARNATAKA

ಪ್ರತೀಕ್ ಶೆಟ್ಟಿ ದೊಡ್ಡ ಡ್ರಗ್ ಪೆಡ್ಲರ್: ಅಲೋಕ್ ಕುಮಾರ್

ಬೆಂಗಳೂರು:  ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಪ್ರತೀಕ್ ಶೆಟ್ಟಿ ಒಬ್ಬ ದೊಡ್ಡ ಪೆಡ್ಲರ್ ಆಗಿದ್ದ ಎಂದು ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಕೇಸಿನಲ್ಲಿ ದಿನಕ್ಕೊಂದು ವ್ಯಕ್ತಿಯ ಹೆಸರು ಕೇಳಿ ಬರುತ್ತಿದೆ. ಸಿಸಿಬಿ ಪೊಲೀಸರು ಈಗಾಗಲೇ, ನಟಿ ರಾಗಿಣಿ ಅಪ್ತ ರವಿಶಂಕರ್ ನನ್ನು ಬಂಧಿಸಿದ್ದಾರೆ. ಜೊತೆಗೆ ಹೈಟೆಕ್ ಡ್ರಗ್ ದಂಧೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಕಾರ್ತಿಕ್ ರಾಜು, ರಾಹುಲ್, ಪ್ರತೀಕ್ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಇಂದು ಈ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು, ಈಗ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಪ್ರತೀಕ್ ಶೆಟ್ಟಿ, ಓರ್ವ ದೊಡ್ಡ ಡ್ರಗ್ ಪೆಡ್ಲರ್ ಆಗಿದ್ದಾನೆ. ಜೊತೆಗೆ ಆತ ಆಫ್ರಿಕನ್ ಪ್ರಜೆಗಳ ಜೊತೆ ನಂಟು ಹೊಂದಿದ್ದಾನೆ. ಈ ಹಿಂದೆಯೇ ಪ್ರತೀಕ್ ಶೆಟ್ಟಿ ಮತ್ತು ಕಾರ್ತಿಕ್ ರಾಜ್‍ಗೆ ನಂಟಿರುವುದು ಗೊತ್ತಿತ್ತು. ಆದರೆ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ.

ಈಗ ಸಿಕ್ಕಿ ಬಿದ್ದಿರುವ ಪ್ರತೀಕ್ ಶೆಟ್ಟಿ, ಈ ಹಿಂದೆಯೇ ದೊಡ್ಡ ಸೆಲೆಬ್ರಿಟಿಗಳಿಗೆ ಕೋಕೆನ್ ಮಾರಾಟ ಮಾಡುತ್ತಿದ್ದ. ನಮ್ಮ ಕಾಲದಲ್ಲೇ ಸೆಲೆಬ್ರಿಟಿಗಳಿಗೆ ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ವಾರ್ನ್ ಮಾಡಲಾಗಿತ್ತು. ಪ್ರತೀಕ್ ಶೆಟ್ಟಿ ಮತ್ತು ಅವರ ತಂಡ ಇಂದಿರಾ ನಗರ, ಎಂ.ಜಿ ರೋಡ್‍ನಲ್ಲಿರುವ ಪಬ್‍ಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.